Site icon Vistara News

Sanjiv Bhatt: ಡ್ರಗ್ಸ್‌ ಕೇಸ್;‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ 20 ವರ್ಷ ಜೈಲು!

Sanjiv Bhatt

Former IPS officer Sanjiv Bhatt gets 20 years in jail 1996 drug planting case

ಗಾಂಧಿನಗರ: ನಕಲಿ ಮಾದಕವಸ್ತು ಪ್ರಕರಣ ದಾಖಲಿಸಿ, ವಕೀಲರೊಬ್ಬರ ವಿರುದ್ಧ ಪಿತೂರಿ ನಡೆಸಿದ ಆರೋಪದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ (Sanjiv Bhatt) ಅವರಿಗೆ ಗುಜರಾತ್‌ (Gujarat) ನ್ಯಾಯಾಲಯವೊಂದು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. 1996ರ ನಕಲಿ ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿರುವ ನ್ಯಾಯಾಲಯವು (Palanpur Court) ಮಾಜಿ ಐಪಿಎಸ್‌ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ, 2 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ಆಗದಿದ್ದರೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಿನಲ್ಲಿರಬೇಕು ಎಂದು ಸೂಚಿಸಿದೆ.

ಏನಿದು ಡ್ರಗ್ಸ್‌ ಕೇಸ್?‌

1996ರಲ್ಲಿ ರಾಜಸ್ಥಾನ ಮೂಲದ ವಕೀಲರೊಬ್ಬರು ಪಾಲನ್‌ಪುರ ಹೋಟೆಲ್‌ನಲ್ಲಿ ತಂಗಿದ್ದರು. ಅವರು ತಂಗಿರುವ ಹೋಟೆಲ್‌ ಕೋಣೆಯಲ್ಲಿ ಪೊಲೀಸರು ಡ್ರಗ್ಸ್‌ ವಶಪಡಿಸಿಕೊಂಡಿದ್ದರು. ಆದರೆ, ಇಡೀ ಪ್ರಕರಣವೇ ಸುಳ್ಳು ಎಂಬುದು ಬಳಿಕ ಸಾಬೀತಾಗಿದೆ. ಸಂಜೀವ್‌ ಭಟ್‌ ಅವರು ಆಗ ಬನಸ್ಕಾಂತದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಈಗ ನ್ಯಾಯಾಲಯವು ನಕಲಿ ಮಾದಕವಸ್ತು ಪ್ರಕರಣದ ಪಿತೂರಿ ನಡೆಸಿದ ಹಿನ್ನೆಲೆಯಲ್ಲಿ ಸಂಜೀವ್‌ ಭಟ್‌ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2018ರಿಂದಲೂ ಜೈಲಿನಲ್ಲಿರುವ ಭಟ್‌

ಸಂಜೀವ್‌ ಭಟ್‌ ಅವರು ವಿವಾದಾತ್ಮಕ ಐಪಿಎಸ್‌ ಅಧಿಕಾರಿಯಾಗಿದ್ದು, ಇವರು ಮತ್ತೊಂದು ಪ್ರಕರಣದಲ್ಲಿ 2018ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜಾಮ್‌ನಗರದಲ್ಲಿ ಕಸ್ಟಡಿಯಲ್ಲಿರುವಾಗಲೇ ಆರೋಪಿಯೊಬ್ಬ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಲಯವು ಸಂಜೀವ್‌ ಭಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇಂತಹ ಪ್ರಕರಣಗಳಿರುವ ಕಾರಣಗಳಿಂದಾಗಿಯೇ ಸಂಜೀವ್‌ ಭಟ್‌ ಅವರನ್ನು 2015ರಲ್ಲಿಯೇ ಕೆಲಸದಿಂದ ವಜಾಗೊಳಿಸಲಾಗಿದೆ.

ಇದನ್ನೂ ಓದಿ: Muhammad Yunus: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞಗೆ ಜೈಲು ಶಿಕ್ಷೆ! ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ

ಪಾಲನ್‌ಪುರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎನ್‌.ಠಕ್ಕರ್‌ ಅವರು ಸಂಜೀವ್‌ ಭಟ್‌ ಅವರಿಗೆ ಶಿಕ್ಷೆ ವಿಧಿಸುವಾಗ ವಿಶೇಷ ಸೂಚನೆ ನೀಡಿದ್ದಾರೆ. ಸಂಜೀವ್‌ ಭಟ್‌ ಅವರು 20 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಈಗ ಸಂಜೀವ್‌ ಭಟ್‌ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಇದು ಮುಗಿದ ಬಳಿಕವೇ ಅವರಿಗೆ 20 ವರ್ಷ ಜೈಲು ಶಿಕ್ಷೆ ಆರಂಭವಾಗುತ್ತದೆ ಎಂದು ಸೂಚಿಸಿದ್ದಾರೆ. ಈಗ ಸಂಜೀವ್‌ ಭಟ್‌ ಅವರಿಗೆ 60 ವರ್ಷ ವಯಸ್ಸು. ಇವರ ವಿರುದ್ಧ ಎನ್‌ಡಿಪಿಎಸ್‌, ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version