ಶ್ರೀಹರಿಕೋಟ: ಚಂದ್ರನ ಅಂಗಳದಲ್ಲಿ ವೈಜ್ಞಾನಿಕ ಮುನ್ನಡೆ ಸಾಧಿಸುವ ದಿಸೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಂದಾಗಿದೆ. ಮಹತ್ವಾಕಾಂಕ್ಷೆಯ ಚಂದ್ರಯಾನ 3 ಉಡಾವಣೆಗೆ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಸಜ್ಜಾಗಿದೆ. ಇದರ ಬೆನ್ನಲ್ಲೇ ಚಂದ್ರಯಾನ 3 ಕುರಿತು ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮಾತನಾಡಿದ್ದಾರೆ. “ಚಂದ್ರಯಾನ 3 ಗೇಮ್ ಚೇಂಜರ್” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಖಂಡಿತವಾಗಿಯೂ ಚಂದ್ರಯಾನ 3 ಮಿಷನ್ ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ. ಚಂದ್ರಯಾನ 3 ಮಿಷನ್ ಯಶಸ್ವಿಯಾಗುವ ಕುರಿತು ಸಂಪೂರ್ಣ ವಿಶ್ವಾಸವಿದೆ. ಭಾರತವು ಜಗತ್ತಿಗೇ ಸ್ಫೂರ್ತಿ ಎನಿಸಲಿದೆ. ಚಂದ್ರಯಾನ 3 ಉಡಾವಣೆಯಾಗುವತನಕ ಕಾಯೋಣ. ಭಾರತದ ಕನಸು ನನಸಾಗುತ್ತದೆ ಎಂಬ ವಿಶ್ವಾಸ ಇಡೋಣ” ಎಂದು ಪಿಟಿಐಗೆ ನಂಬಿ ನಾರಾಯಣನ್ ತಿಳಿಸಿದ್ದಾರೆ.
“ಭಾರತವು ಚಂದ್ರಯಾನ 3 ಮಿಷನ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರೆ ಇಂತಹ ಸಾಧನೆಗೈದ ಜಗತ್ತಿನ ನಾಲ್ಕನೇ ದೇಶ ಎನಿಸಲಿದೆ. ಅಮೆರಿಕ, ಚೀನಾ ಹಾಗೂ ರಷ್ಯಾದ ಸಾಲಿಗೆ ಭಾರತವೂ ಸೇರಲಿದೆ. ಇದರಿಂದ ಭಾರತವು ಆರ್ಥಿಕವಾಗಿ ಏಳಿಗೆ ಹೊಂದುವ ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದಂತಾಗುತ್ತದೆ. ಬಾಹ್ಯಾಕಾಶ ಉದ್ಯಮದಲ್ಲೂ ಭಾರತದ ಪ್ರಾಬಲ್ಯ ಇರಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ; ಸಾಫ್ಟ್ ಲ್ಯಾಂಡ್‌ಗೆ ಎಷ್ಟು ದಿನ ಬೇಕು?
ಚಂದ್ರಯಾನ 3 ಮಿಷನ್ ಉಡಾವಣೆಗೆ ಇಸ್ರೊ ಸಕಲ ರೀತಿಯಲ್ಲಿ ಸಜ್ಜಾಗಿದೆ. ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ 3 ಮಿಷನ್ ಉಡಾವಣೆಯಾಗಲಿದೆ. ಚಂದ್ರಯಾನ 3 ಉಡಾವಣೆ ಯಶಸ್ವಿಯಾದರೂ ಮಿಷನ್ ಸಂಪೂರ್ಣವಾಗಲು ನಾವು ಆಗಸ್ಟ್ 23ರವರೆಗೆ ಕಾಯಬೇಕಿದೆ. ಆಗಸ್ಟ್ 23ರಂದು ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆದಾಗ ಮಿಷನ್ ಯಶಸ್ವಿ ಎನಿಸಲಿದೆ.