ತಿರುವನಂತಪುರಂ: ಕೇರಳ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ (KK Shailaja) ಅವರು ಏಷ್ಯಾದ ನೊಬೆಲ್ ಎಂದೇ ಖ್ಯಾತಿಯಾದ, ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿ ಸಮಿತಿಯು ಶೈಲಜಾ ಅವರಿಗೆ ಪ್ರಶಸ್ತಿ ಕುರಿತು ಪತ್ರ ಬರೆದಿದ್ದು, ಪತ್ರ ತಲುಪಿದ ಬಳಿಕ ಅವರು ಪ್ರಶಸ್ತಿಯನ್ನು ಸ್ವೀಕರಿಸದಿರಲು ತೀರ್ಮಾನಿಸಿದ್ದಾರೆ.
“ವೈಯಕ್ತಿಕ ನೆಲೆಗಟ್ಟಿನಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ಇಷ್ಟಪಡುವುದಿಲ್ಲ. ಸಿಪಿಐ(ಎಂ) ವರಿಷ್ಠರ ಜತೆ ಚರ್ಚಿಸಿ, ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿದ್ದೇನೆ” ಎಂದು ಶೈಲಜಾ ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರಶಸ್ತಿ ತಿರಸ್ಕರಿಸಿದ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರೂ ಪ್ರತಿಕ್ರಿಯಿಸಿದ್ದಾರೆ.
“ಪ್ರಶಸ್ತಿಯು ರಾಮೋನ್ ಮ್ಯಾಗ್ಸೆಸೆ ಹೆಸರಿನಲ್ಲಿದೆ. ಫಿಲಿಪ್ಪೀನ್ಸ್‌ನಲ್ಲಿ ಮ್ಯಾಗ್ಸಸೆಯು ಕಮ್ಯುನಿಸ್ಟರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಹಾಗಾಗಿ, ಪ್ರಶಸ್ತಿ ಸ್ವೀಕರಿಸುತ್ತಿಲ್ಲ” ಎಂದು ಯೆಚೂರಿ ಸ್ಪಷ್ಟಪಡಿಸಿದ್ದಾರೆ. ಕೇರಳದ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರು ಕೊರೊನಾ ಬಿಕ್ಕಟ್ಟಿನ ವೇಳೆ ಜನರಿಗೆ ಸ್ಪಂದಿಸಿದ ರೀತಿ, ಸೋಂಕಿನ ನಿರ್ವಹಣೆ ವಿಚಾರದಲ್ಲಿ ದೇಶಾದ್ಯಂತ ಮೆಚ್ಚುಗೆ ಗಳಿಸಿದ್ದರು.
ಫಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ರಾಮೋನ್ ಮ್ಯಾಗ್ಸೆಸೆ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತದೆ. ಸಮಗ್ರ ಆಡಳಿತ, ಜನರ ಸೇವೆ ಹಾಗೂ ಪ್ರಜಾಪ್ರಭುತ್ವ ನೆಲೆಗಟ್ಟಿನ ಮೇಲೆ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರಿಗೆ ಮ್ಯಾಗ್ಸೆಸೆ ನೀಡಲಾಗುತ್ತದೆ.
ಇದನ್ನೂ ಓದಿ | ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಎಂದು ಸೀತಾರಾಮ್ ಯೆಚೂರಿ ಕಳವಳ