Site icon Vistara News

ಕಾಂಗ್ರೆಸ್‌ಗೆ ಬಿಗ್‌ ಶಾಕ್; ಪಕ್ಷ ತೊರೆದು ಬಿಜೆಪಿ ಸೇರಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮೊಮ್ಮಗ

Vibhakar Shastri

Former PM Lal Bahadur Shastri's grandson Vibhakar Shastri quits Congress and joins BJP

FacebookTwitterWhatsAppPinterestTelegramLinkedInKoo

ಲಖನೌ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ಇದಕ್ಕಾಗಿ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದರ ಮಧ್ಯೆಯೇ, ಮಾಜಿ ಪ್ರಧಾನಿ, ಅಪ್ಪಟ ಕಾಂಗ್ರೆಸ್ಸಿಗ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್‌ ಶಾಸ್ತ್ರಿ (Vibhakar Shastri) ಅವರು ಕಾಂಗ್ರೆಸ್‌ (Congress) ತೊರೆದು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಇದರಿಂದ ಲೋಕಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾದಂತಾಗಿದೆ.

ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆಲವೇ ನಿಮಿಷದಲ್ಲಿ ವಿಭಾಕರ್‌ ಶಾಸ್ತ್ರಿ ಅವರು ಉತ್ತರ ಪ್ರದೇಶದ ಲಖನೌನಲ್ಲಿ ಬಿಜೆಪಿ ಸೇರ್ಪಡೆಯಾದರು. ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ಅವರು ವಿಭಾಕರ್‌ ಶಾಸ್ತ್ರಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಇದಾದ ಬಳಿಕ ಮಾತನಾಡಿದ ಶಾಸ್ತ್ರಿ, “ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷಣೆಯು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಾಕಾರವಾಗಲಿದೆ ಎಂಬ ನಂಬಿಕೆ” ಎಂದು ಪ್ರಧಾನಿಯನ್ನು ಹೊಗಳಿದರು.

ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಕುರಿತು ವಿಭಾಕರ್‌ ಶಾಸ್ತ್ರಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದರು. “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ, ನಾನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದರು. ಇದಾದ ಕೆಲವೇ ನಿಮಿಷದಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಮಹಾರಾಷ್ಟ್ರದಲ್ಲಿ ಅಶೊಕ್‌ ಚೌಹಾಣ್‌ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ ಬಳಿಕ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಲಾಗಿದೆ. ಈಗ ವಿಭಾಕರ್‌ ಶಾಸ್ತ್ರಿ ಅವರಿಗೂ ಬಿಜೆಪಿ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Rajya Sabha Election: ಬಿಜೆಪಿಯಿಂದ ಮತ್ತೊಂದು ಪಟ್ಟಿ; ಇಬ್ಬರು ಸಚಿವರಿಗೆ ರಾಜ್ಯಸಭೆ ಟಿಕೆಟ್‌

ಕಾಂಗ್ರೆಸ್‌ಗೆ ಸಾಲು ಸಾಲು ನಾಯಕರ ವಿದಾಯ

ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಹಲವು ನಾಯಕರನ್ನು ಕಳೆದುಕೊಂಡಿದೆ. ಮಂಗಳವಾರವಷ್ಟೇ (ಫೆಬ್ರವರಿ 13) ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕರಾಗಿದ್ದ ಅಶೋಕ್‌ ಚೌಹಾಣ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು, ಕಾಂಗ್ರೆಸ್‌ನ ಮಿಲಿಂದ್‌ ದಿಯೋರ ಅವರು ಪಕ್ಷ ತೊರೆದು ಏಕನಾಥ್‌ ಶಿಂಧೆ ಬಣದ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಇಂಡಿಯಾ ಒಕ್ಕೂಟದಿಂದಲೂ ಟಿಎಂಸಿ, ಜೆಡಿಯು, ಪಂಜಾಬ್‌ನಲ್ಲಿ ಆಪ್‌ ಹೊರಬಂದು, ಸ್ವತಂತ್ರವಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿವೆ. ಇದು ಕೂಡ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version