Site icon Vistara News

Parkash Singh Badal: ಪಂಜಾಬ್‌ನ ಮಾಜಿ ಸಿಎಂ, ಅಕಾಲಿ ದಳದ ವರಿಷ್ಠ ಪ್ರಕಾಶ್ ಸಿಂಗ್ ಬಾದಲ್ ನಿಧನ, ಕಂಬನಿ ಮಿಡಿದ ನಾಯಕರು

Former Punjab CM and Akali Dal patriarch Parkash Singh Badal dies at 95

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಅಕಾಲಿ ದಳದ ವರಿಷ್ಠ ನಾಯಕ ಪ್ರಕಾಶ್ ಸಿಂಗ್ ಬಾದಲ್ (Parkash Singh Badal) ಅವರು ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಪತ್ನಿ ಸುರೀಂದೇರ್ ಕೌರ್, ಪುತ್ರ ಸುಖ್ಬೀರ್ ಸಿಂಗ್, ಸೊಸೆ ಹರ್ಸಿಮ್ರತ್ ಕೌರ್ ಬಾದಲ್ ಅವರಿದ್ದಾರೆ.

ಐದು ಬಾರಿ ಸಿಎಂ ಆಗಿದ್ದ ಪ್ರಕಾಶ್ ಸಿಂಗ್ ಅವರನ್ನು ಕಳೆದ ವಾರ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್‌ ಮುಖ್ಯಮಂತ್ರಿ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು.

ಪ್ರಕಾಶ್ ಸಿಂಗ್ ಬಾದಲ್ ಅವರ ಪಾರ್ಥಿವ ಶರೀರವನ್ನು ಮೊಹಾಲಿಯಿಂದ ಅವರ ಸ್ವಂತ ಊರು ಬಾದಲ್‌ಗೆ ಬುಧವಾರ ಬೆಳಗ್ಗೆ ತೆಗೆದುಕೊಂಡು ಹೋಗಲಾತ್ತಿದೆ. ಸೋಮವಾರ ಸಂಜೆ ಹೊರಡಿಸಲಾದ ಮೆಡಿಕಲ್ ಬುಲೆಟಿನ್‌ನಲ್ಲಿ, ಪ್ರಕಾಶ್ ಸಿಂಗ್ ಬಾದಲ್ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಆದರೆ, ಮಂಗಳವಾರ ಸಂಜೆ ಅವರು ನಿಧನರಾದರು.

ಐದು ಬಾರಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿಯಾಗಿದ್ದ ಅವರು ಕಳೆದ ವರ್ಷ ಜೂನ್‌ನಲ್ಲಿ ಜಠರ ಸಮಸ್ಯೆ ಹಾಗೂ ಶ್ವಾಸನಾಳದ ಅಸ್ತಮಾದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದರು.

ಪ್ರಕಾಶ್ ಸಿಂಗ್ ಬಾದಲ್ ಯಾರು?

ಪಂಜಾಬ್ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಅಸ್ತಿತ್ವವನ್ನು ಹೊಂದಿದ್ದರು. ಅಕಾಲಿ ದಳದ ಮೂಲಕ ಪಂಜಾಬ್‌ನಲ್ಲಿ ತಮ್ಮದೇ ಆದ ರಾಜಕೀಯ ವರ್ಗವನ್ನು ಸೃಷ್ಟಿಸಿಕೊಂಡಿದ್ದರು. ಪ್ರಕಾಶ್ ಸಿಂಗ್ ಬಾದಲ್ ಅವರು, 1970-71, 1977-80, 2007-2017ರ ಅವಧಿಯಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಪಂಜಾಬ್‌ ಮುಖ್ಯ ಮಂತ್ರಿ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಖ್ಯಾತಿ ಕೂಡ ಅವರಿಗಿದೆ.

ಪಂಜಾಬ್‌ನ ಅಬುಲ್ ಖುರಾನಾ ಹಳ್ಳಿಯಲ್ಲಿ 1927 ಡಿಸೆಂಬರ್ 8ರಂದು ಪ್ರಕಾಶ್ ಸಿಂಗ್ ಬಾದಲ್ ಜನಿಸಿದರು. 1950ರಲ್ಲಿ ಅಕಾಲಿದಳ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಪ್ರಕಾಶ್ ಸಿಂಗ್ ಬಾದಲ್ ಅವರು ಹಲವು ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು 1970ರಲ್ಲಿ ಮೊದಲ ಬಾರಿಗೆ ಪಂಜಾಬ್ ಮುಖ್ಯಮಂತ್ರಿ ಹುದ್ದೆಗೇರಿದರು.

ಪಂಜಾಬ್‌ ರಾಜಕಾರಣದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಹಲವು ಬಾರಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಅವರು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಹಾಗಾಗಿ, ಅಕಾಲಿದಳ ಮೇಲೆ ಪಂಜಾಬಿಗರಿಗೆ ಸಾಕಷ್ಟು ನಂಬಿಕೆ ಇತ್ತು. ಅವರ ಪುತ್ರ ಕೂಡ ಪಂಜಾಬ್ ಸಿಎಂ ಆಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ಪ್ರಕಾಶ್ ಸಿಂಗ್ ಬಾದಲ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಭಾರತೀಯ ರಾಜಕೀಯದ ಅದ್ಭುತ ವ್ಯಕ್ತಿಯಾಗಿದ್ದರು. ನಮ್ಮ ರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ಗಮನಾರ್ಹ ರಾಜನೀತಿಜ್ಞರಾಗಿದ್ದರು. ಪಂಜಾಬ್‌ನ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ನಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಪ್ರಕಾಶ್ ಸಿಂಗ್ ಬಾದಲ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಟ್ವೀಟ್ ಮೂಲಕ ರಾಹುಲ್ ಗಾಂಧಿ ಶ್ರದ್ಧಾಂಜಲಿ

Exit mobile version