Site icon Vistara News

Amritpal Singh: ಖಲಿಸ್ತಾನಿ ಅಮೃತ್‌ಪಾಲ್‌ ಸಿಂಗ್‌ ಬಂಧನವೂ ಎಮರ್ಜನ್ಸಿ ಎಂದ ಕೈ ನಾಯಕ ಚರಣ್‌ಜಿತ್ ಸಿಂಗ್‌ ಚನ್ನಿ!

Amritpal Singh

ಚಂಡೀಗಢ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಜೈಲಿನಿಂದಲೇ ಸ್ಪರ್ಧಿಸಿ ಸಂಸದನಾಗಿ ಆಯ್ಕೆಯಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistani) ಅಮೃತ್‌ ಪಾಲ್‌ ಸಿಂಗ್‌(Amritpal Singh) ಪರವಾಗಿ ಕಾಂಗ್ರೆಸ್‌ ಹಿರಿಯ ನಾಯಕ, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ (Charanjit Singh Channi) ಬ್ಯಾಟಿಂಗ್‌ ಮಾಡಿದ್ದಾರೆ. “ಅಮೃತ್‌ಪಾಲ್‌ ಸಿಂಗ್‌ನನ್ನು 20 ಲಕ್ಷ ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆತನ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದಿದೆ” ಎಂದು ಮಾಜಿ ಸಿಎಂ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ ಚರಣ್‌ಜಿತ್‌ ಸಿಂಗ್‌ ಚನ್ನಿ, “ಸುಮಾರು 20 ಲಕ್ಷ ಜನ ಅಮೃತ್‌ಪಾಲ್‌ ಸಿಂಗ್‌ಗೆ ಮತ ಹಾಕಿ, ಗೆಲ್ಲಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಆತನನ್ನು ಜೈಲಿಗೆ ಕಳುಹಿಸುವ ಮೂಲಕ ಕೇಂದ್ರ ಸರ್ಕಾರವು ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ. ಇದು ಕೂಡ ತುರ್ತು ಪರಿಸ್ಥಿತಿಗೆ ಸಮನಾಗಿದೆ” ಎಂಬುದಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದಾರೆ. ಅಮೃತ್‌ ಪಾಲ್‌ ಸಿಂಗ್‌ ಖಡೂರ್‌ ಸಾಹೀಬ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ ಅಭ್ಯರ್ಥಿ ಕುಲ್ಬೀರ್‌ ಸಿಂಗ್‌ ವಿರುದ್ಧ 2 ಲಕ್ಷ ವೋಟುಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾನೆ. ಈತನನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.

ಯಾರು ಈ ಅಮೃತ್‌ಪಾಲ್‌ ಸಿಂಗ್‌?

ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಕೆಲವು ದಿನಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.

ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಪಂಜಾಬ್‌ನಲ್ಲಿ ಅಮೃತ್‌ಪಾಲ್‌ನನ್ನು ಅರೆಸ್ಟ್‌ ಮಾಡಲಾಗಿತ್ತು.

ಇದನ್ನೂ ಓದಿ: Amritpal Singh: ತಾಯಿ ವಿರುದ್ಧವೇ ಹೇಳಿಕೆ ನೀಡಿದ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌; ಕಾರಣವೇನು?

Exit mobile version