ನವ ದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಉದ್ಯಮಗಳಾದ, ಭಾರತೀಯ ಉಕ್ಕು ಪ್ರಾಧಿಕಾರ(SAIL) ಹಾಗೂ ಮಾರುತಿ ಉದ್ಯೋಗ್ ಲಿಮಿಟೆಡ್ (ಮಾರುತಿ ಸುಜುಕಿ) ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ಜೂ.26ರಂದು ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ವಿ.ಕೃಷ್ಣಮೂರ್ತಿ ಮೂಲತಃ ತಮಿಳುನಾಡಿನವರಾಗಿದ್ದು, ತಿರುವರೂರ್ ಜಿಲ್ಲೆಯ ಕರುವೇಲಿ ಅವರ ಹುಟ್ಟೂರು. ಇವರ ತಂದೆ-ತಾಯಿಗೆ ಒಟ್ಟು ಆರು ಮಕ್ಕಳು. ಮೊದಲು ತಾತನ ಕಾಲದಲ್ಲಿ ಶ್ರೀಮಂತರೇ ಆಗಿದ್ದರೂ, ನಂತರ ಪ್ರವಾಹದಿಂದ ಇವರ ಭೂಮಿ-ಬೆಳೆ ಎಲ್ಲವೂ ನಾಶವಾಗಿತ್ತು. ಬಳಿಕ ಮನೆಯನ್ನು ಮಾರಬೇಕಾದ ಪರಿಸ್ಥಿತಿ ಬಂತು. ಕೃಷ್ಣಮೂರ್ತಿ ತಮ್ಮ ತಾಯಿಯೊಂದಿಗೆ ಮಾವನ ಮನೆಗೆ ಹೋದರೆ, ಇವರ ತಂದೆ ಉದ್ಯೋಗ ಅರಸಿ ಚೆನ್ನೈಗೆ ತೆರಳಿದರು. ಆದರೆ ಕೃಷ್ಣಮೂರ್ತಿ 11 ವರ್ಷವಾಗಿದ್ದಾಗ ತಾಯಿಯನ್ನೂ ಕಳೆದುಕೊಂಡರು. ಹಣಕಾಸಿನ ಸಮಸ್ಯೆಯಿಂದ ಇವರ ಸೋದರರು ಶಿಕ್ಷಣ ನಿಲ್ಲಿಸಿದರು. ಕೃಷ್ಣಮೂರ್ತಿ ಯಾವ ಕಾರಣಕ್ಕೂ ಶಿಕ್ಷಣ ಅರ್ಧಕ್ಕೆ ನಿಲ್ಲಿಸದೆ, ಎಲೆಕ್ಟ್ರಿಕ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷ ಡಿಪ್ಲೋ ಮಾಡಿದರು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದರು. ವೃತ್ತಿ ಜೀವನ ಪ್ರಾರಂಭಿಸಿ, ಭಾರತೀಯ ಉದ್ಯಮ ಕ್ಷೇತ್ರದ ಪಿತಾಮಹ ಎಂದೂ ಕರೆಸಿಕೊಂಡರು.
1972-1977ರ ಅವಧಿಯಲ್ಲಿ BHEL ಅಧ್ಯಕ್ಷರಾಗಿದ್ದರು. 1981ರಲ್ಲಿ ಅಂದಿನ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಮಾರುತಿ ಉದ್ಯೋಗ್ ಲಿಮಿಟೆಡ್ ಸ್ಥಾಪಿಸಿದಾಗ, ವಿ. ಕೃಷ್ಣಮೂರ್ತಿ ಅದರ ಸಂಸ್ಥಾಪಕ ಅಧ್ಯಕ್ಷನ ಸ್ಥಾನಕ್ಕೆ ಏರಿದರು. ೧೯೯೦ರವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ, ಮಾರುತಿ ಸುಜುಕಿಗೆ ಹೊಸ ಸ್ಪರ್ಶ ನೀಡಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಮಾರುತಿ 800ಕಾರು ಸಿಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮಧ್ಯೆ 1985ರಲ್ಲಿ ಅವರು ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷರಾಗಿಯೂ ನೇಮಕರಾದರು. ೧೯೯೦ರ ವರೆಗೆ ಹುದ್ದೆಯಲ್ಲಿ ಮುಂದುವರಿದ ಅವರು ಅಲ್ಲಿಯೂ ಹಲವು ಹೊಸ ಬದಲಾವಣೆಗಳನ್ನು ಮಾಡಿದ್ದಾರೆ.
ಪದ್ಮ ಗೌರವ
ವಿ. ಕೃಷ್ಣಮೂರ್ತಿಯವರು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಮೂರೂ ಉನ್ನತ ಗೌರವಗಳಿಗೆ ಪಾತ್ರರಾಗಿದ್ದಾರೆ. ಯಾವುದೇ ಹುದ್ದೆಗೆ ಹೋಗಲಿ ಇವರಲ್ಲಿ ಗೇಮ್ ಚೇಂಜರ್ ಎನ್ನಿಸಿಕೊಳ್ಳುತ್ತಿದ್ದರು. ಉದ್ಯಮ ವಲಯದಲ್ಲಿನ ಸಾಧನೆಗಾಗಿ 1973ರಲ್ಲಿ ಪದ್ಮಶ್ರೀ, 1986ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮವಿಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ. ಅದರ ಹೊರತಾಗಿ ಬ್ಯುಸಿನೆಸ್ ಲೀಡರ್‌ಶಿಪ್ ಅವಾರ್ಡ್, ಬ್ಯುಸಿನೆಸ್‌ಮೆನ್ ಆಫ್ ದಿ ಇಯರ್ (1987), ಸ್ಟೀಲ್‌ಮೆನ್ ಆಫ್ ದಿ ಇಯರ್ (1989) ಇತ್ಯಾದಿ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಗಣ್ಯರಿಂದ ಸಂತಾಪ
ವಿ.ಕೃಷ್ಣಮೂರ್ತಿ ನಿಧನಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಭಾರತದ ಸಾರ್ವಜನಿಕ ಉದ್ಯಮಗಳ ವಲಯದಲ್ಲಿ ವರಿಷ್ಠನಾಗಿದ್ದ , ಪದ್ಮವಿಭೂಷಣ ಡಾ. ವಿ.ಕೃಷ್ಣಮೂರ್ತಿಯವರ ನಿಧನ ತೀವ್ರ ನೋವು ಕೊಟ್ಟಿದೆ” ಎಂದಿದ್ದಾರೆ. “ಭಾರತ ಉದ್ಯಮ ಕ್ಷೇತ್ರದ ಒಬ್ಬ ಧೀಮಂತನನ್ನು ಕಳೆದುಕೊಂಡಿದೆ” ಎಂದು ತಮಿಳುನಾಡು ರಾಜ್ಯಪಾಲರು ನೋವು ವ್ಯಕ್ತಪಡಿಸಿದ್ದಾರೆ. ” ವಿ.ಕೃಷ್ಣಮೂರ್ತಿಯವರನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ” ಎಂದು ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ| ರಾಜಾರಾಮ್ ಬುಕ್‌ಹೌಸ್ ಮಾಲೀಕ ಮಂಜುನಾಥ್ ಕಶ್ಯಪ್ ನಿಧನ