Site icon Vistara News

Puja Khedkar: ಮಾಜಿ ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

Puja Khedkar

ನವದೆಹಲಿ: ನಕಲಿ ಅಂಗವಿಕಲ ಪ್ರಮಾಣಪತ್ರ, ನಕಲಿ ಗುರುತಿನ ದಾಖಲೆ, ತಂದೆ-ತಾಯಿ ಹೆಸರು ಬದಲಾಯಿಸಿ ನಕಲಿ ಸರ್ಟಿಫಿಕೇಟ್‌ ಸೃಷ್ಟಿ, ಒಬಿಸಿ ಎಂದು ಕೂಡ ಸುಳ್ಳು ದಾಖಲೆ (Fake Documents) ಸಲ್ಲಿಸಿ, ಐಎಎಸ್‌ ಪಾಸಾಗಿ, ಟ್ರೈನಿ ಅಧಿಕಾರಿಯಾಗಿದ್ದಾಗಲೇ ದರ್ಪ ತೋರಿಸಿದ ಮಹರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್‌ (Puja Khedkar) ಅವರ ನೇಮಕವನ್ನು ಯುಪಿಎಸ್‌ಸಿಯು ಅನೂರ್ಜಿತಗೊಳಿಸಿದೆ. ಇದರ ಬೆನ್ನಲ್ಲೇ, ದೆಹಲಿ ನ್ಯಾಯಾಲಯ ಪೂಜಾ ಖೇಡ್ಕರ್‌ ಸಲ್ಲಿಸಿದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯನ್ನು ನಿರಾಕರಿಸಿದೆ. ಇದು ಮಾಜಿ ಟ್ರೈನಿ ಅಧಿಕಾರಿಗೆ ಮತ್ತೊಂದು ಸಂಕಷ್ಟ ತಂದಿದೆ.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ದೇವೇಂದರ್‌ ಕುಮಾರ್‌ ಜಂಗಾಲ ಅವರು ನಿರೀಕ್ಷಣಾ ಅರ್ಜಿಯನ್ನು ವಜಾಗೊಳಿಸಿದರು. ಹಾಗೆಯೇ, “ಬೇರೆ ಅಭ್ಯರ್ಥಿಗಳು ಕೂಡ ಇದೇ ರೀತಿ ಮೀಸಲಾತಿಯ ಕುರಿತು ನಕಲಿ ದಾಖಲೆ ಸೃಷ್ಟಿಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು. ವಯಸ್ಸು, ಜಾತಿ, ವಿಶೇಷ ಚೇತನ ಎಂಬುದಾಗಿ ನಕಲಿ ದಾಖಲೆ ಸೃಷ್ಟಿ ಸೇರಿ ಹಲವು ರೀತಿಯ ತಪಾಸಣೆ ಮಾಡಬೇಕು” ಎಂಬುದಾಗಿ ಪೊಲೀಸರಿಗೆ ಸೂಚನೆ ನೀಡಿದರು.

ನಕಲಿ ದಾಖಲೆ ಸೃಷ್ಟಿ ಸೇರಿ ಪೂಜಾ ಖೇಡ್ಕರ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಯುಪಿಎಸ್‌ಸಿಯು ಆಯೋಗ ಒಂದನ್ನು ರಚಿಸಿತ್ತು. ಆಯೋಗದ ವರದಿಯಲ್ಲಿ ಪೂಜಾ ಖೇಡ್ಕರ್‌ ತಪ್ಪೆಸಗಿದ್ದು, ನಕಲಿ ದಾಖಲೆ ಸೃಷ್ಟಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯುಪಿಎಸ್‌ಸಿ ಕಠಿಣ ಕ್ರಮ ತೆಗೆದುಕೊಂಡಿದೆ. ಇವರನ್ನು ಸೇವೆಯಿಂದ ವಜಾಗೊಳಿಸುವ ಜತೆಗೆ ಯುಪಿಎಸ್‌ಸಿ ಕೈಗೊಳ್ಳುವ ಯಾವುದೇ ಪರೀಕ್ಷೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.

ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್‌ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್‌ ಡಾಕ್ಯುಮೆಂಟ್‌ ತಯಾರಿಸಿದ ಆರೋಪಗಳನ್ನೂ ಎದುರಿಸಿದ್ದರು. ಈಗ ಅವರ ವಿರುದ್ಧದ ಆರೋಪಗಲು ಸಾಬೀತಾದ ಹಿನ್ನೆಲೆಯಲ್ಲಿ ಯುಪಿಎಸ್‌ಸಿಯು ಮಹತ್ವದ ಕ್ರಮ ತೆಗೆದುಕೊಂಡಿದೆ.

ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್‌ ಕಲೆಕ್ಟರ್)‌ ವಾಶಿಂಗೆ ವರ್ಗಾವಣೆಗೊಂಡಿದ್ದ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್‌ ಡಾಕ್ಯುಮೆಂಟ್‌ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್‌ ಟೆಸ್ಟ್‌ ಪ್ರಕಾರ ಪೂಜಾ ಖೇಡ್ಕರ್‌ ಅವರು ಫಿಟ್‌ ಇದ್ದಾರೆ ಎಂದು ಹೇಳಲಾಗುತ್ತಿದೆ.‌ 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್‌ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ವಯಸ್ಸಿನ ಕುರಿತೂ ಸುಳ್ಳು ದಾಖಲೆ

ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್‌ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿತ್ತು. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿತ್ತು.

ಇದನ್ನೂ ಓದಿ: Puja Khedkar: ನಕಲಿ ದಾಖಲೆ ಸೃಷ್ಟಿ; ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನೇಮಕ ರದ್ದು, ಪರೀಕ್ಷೆಯಿಂದಲೇ ಯುಪಿಎಸ್‌ಸಿ ಬ್ಯಾನ್!

Exit mobile version