Site icon Vistara News

Sharad Yadav Passes Away | ಕೇಂದ್ರದ ಮಾಜಿ ಸಚಿವ, ಆರ್‌ಜೆಡಿ ವರಿಷ್ಠ ಶರದ್‌ ಯಾದವ್‌ ಇನ್ನಿಲ್ಲ, ಕಂಬನಿ ಮಿಡಿದ ಮೋದಿ

Sharad Yadav Dies

ಪಟನಾ: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ಜನತಾ ದಳ (RJD) ವರಿಷ್ಠ ಶರದ್ ಯಾದವ್‌ (75) ಅವರು ಗುರುವಾರ ರಾತ್ರಿ (Sharad Yadav Passes Away) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶರದ್‌ ಯಾದವ್‌ ಅವರ ಪುತ್ರಿ ಸುಭಾಷಿಣಿ ಯಾದವ್‌ ಅವರು ತಂದೆಯ ಅಗಲಿಕೆಯ ಕುರಿತು ಟ್ವೀಟ್‌ ಮಾಡಿದ್ದಾರೆ. ‘ಅಪ್ಪ ಇನ್ನಿಲ್ಲ’ ಎಂದು ಸುಭಾಷಿಣಿ ಟ್ವೀಟ್‌ ಮಾಡಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶರದ್‌ ಯಾದವ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

“ಶರದ್‌ ಯಾದವ್‌ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಕವಾಗಿದೆ. ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅವರು ಸಂಸದರಾಗಿ, ಸಚಿವರಾಗಿ ಜನ ಸೇವೆ ಮಾಡಿದ್ದರು. ಯಾದವ್‌ ಅವರು ಡಾ.ಲೋಹಿಯಾ ವಿಚಾರಗಳಿಂದ ಪ್ರೇರೇಪಿತರಾಗಿದ್ದರು. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂಬುದಾಗಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಡಾ.ಲೋಹಿಯಾ ಅವರ ವಿಚಾರಗಳಿಂದ ಪ್ರೇರೇಪಿತರಾಗಿದ್ದ ಶರದ್‌ ಯಾದವ್‌ ಅವರು ತುರ್ತು ಪರಿಸ್ಥಿತಿ ಹೋರಾಟದಲ್ಲಿ ಧುಮುಕಿ, ಬಳಿಕ ರಾಜಕೀಯ ಜೀವನ ಆರಂಭಿಸಿದರು. ಇದುವರೆಗೆ ಏಳು ಬಾರಿ ಲೋಕಸಭೆ ಹಾಗೂ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಂದರೆ, 1999ರಿಂದ 2004ರ ಅವಧಿಯಲ್ಲಿ ಶರದ್‌ ಯಾದವ್‌ ಅವರು ನಾಗರಿಕ ವಿಮಾನಯಾನ, ಕಾರ್ಮಿಕ, ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಸಾರ್ವಜನಿಕ ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಜೆಡಿಯು ಸಹ ಸಂಸ್ಥಾಪಕರೂ ಆದ ಶರದ್‌ ಯಾದವ್‌ ಅವರು ಆ ಪಕ್ಷದಿಂದ ಹೊರಬಂದಿದ್ದರು. ನಿತೀಶ್‌ ಕುಮಾರ್‌ ಅವರು ಬಿಜೆಪಿ ಜತೆಗೂ ಸರ್ಕಾರ ರಚಿಸುತ್ತಲೇ ಜೆಡಿಯುನಿಂದ ಹೊರಬಂದು 2018ರಲ್ಲಿ ಲೋಕತಾಂತ್ರಿಕ ಜನತಾ ದಳ ಪಕ್ಷ ಸ್ಥಾಪಿಸಿದ್ದರು. ಇದನ್ನು ಬಳಿಕ ಆರ್‌ಜೆಡಿ ಜತೆ ವಿಲೀನಗೊಳಿಸಿದ್ದರು.

ಇದನ್ನೂ ಓದಿ | Keshari Nath Tripathi | ಬಿಜೆಪಿ ಹಿರಿಯ ನಾಯಕ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಕೇಸರಿನಾಥ್​ ತ್ರಿಪಾಠಿ ನಿಧನ

Exit mobile version