ಜೈಪುರ: ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ (Sabarmati-Agra Express) ರೈಲು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮದರ್ ರೈಲು ನಿಲ್ದಾಣದ ಬಳಿ ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ರೈಲು ಹಳಿ ತಪ್ಪಿದೆ (Train Derails) ಎಂದು ರೈಲ್ವೆ ಇಲಾಖೆ (Indian Railways) ಮೂಲಗಳು ತಿಳಿಸಿವೆ. ತಡರಾತ್ರಿ ಸುಮಾರು 3 ಗಂಟೆ ಸುಮಾರಿಗೆ ಹಳಿಗಳಿಂದ ರೈಲಿನ ಬೋಗಿಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರೈಲ್ವೆ ಇಲಾಖೆಯು ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ರೈಲು ಹಳಿ ತಪ್ಪುತ್ತಲೇ ಜನ ನಿದ್ದೆಗಣ್ಣಿನಲ್ಲಿ ಇದ್ದರೂ ಕೆಳಗಡೆ ಇಳಿದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿದುಬಂದಿಲ್ಲ. ಕೆಲವರಿಗೆ ಮಾತ್ರ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ರೈಲು ಹಳಿ ತಪ್ಪಿ, ಬೋಗಿಗಳು ಹಳಿಗಳಿಂದ ಕೆಳಗೆ ಇಳಿದ ಕಾರಣ ಬೇರೆ ರೈಲು ಸಂಚಾರಕ್ಕೆ ಅಡಚಣೆಯಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Train Accident : ಆಂಧ್ರದ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯ ಹೌರಾ-ಚೆನ್ನೈ ಮಾರ್ಗದಲ್ಲಿ ವಿಶಾಖಪಟ್ಟಣಂ-ಪಲಸಾ ವಿಶೇಷ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ವಿಶಾಖಪಟ್ಟಣಂ-ರಾಯಗಢ ಪ್ಯಾಸೆಂಜರ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂರು ಬೋಗಿಗಳು ಹಳಿ ತಪ್ಪಿ 14 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.
ಇದಲ್ಲದೆ ಕಳೆದ ವರ್ಷ ಒಡಿಶಾದಲ್ಲೂ ಭೀಕರ ರೈಲು ದುರಂತ ಸಂಭವಿಸಿತ್ತು. ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನ ಮೃತಪಟ್ಟಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ