ಕರ್ನಾಲ್ (ಹರಿಯಾಣ): ಖಲಿಸ್ತಾನ್ ಉಗ್ರರ ಜತೆ ಸಂಪರ್ಕ ಹೊಂದಿದ ಪಂಜಾಬ್ ಮೂಲದ ನಾಲ್ವರು ಗ್ಯಾಂಗ್ ಸ್ಟರ್‌ಗಳನ್ನು ಹರಿಯಾಣದ ಕರ್ನಾಲ್‌ನಲ್ಲಿ ಬಂಧಿಸಲಾಗಿದೆ. ಕರ್ನಾಲ್ ಟೋಗ್ ಪ್ಲಾಜಾದಲ್ಲಿ ವಾಹನವೊಂದರ ತಪಾಸಣೆ ವೇಳೆ ದೊಡ್ಡ ಪ್ರಮಾಣದ ಅತ್ಯಾಧುನಿಕ ಸ್ಪೋಟಕ ಸಾಧನಗಳು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಪತ್ತೆಯಾದ ಬೆನ್ನಿಗೇ ಈ ಬಂಧನ ನಡೆದಿದೆ.
ಈ ಗ್ಯಾಂಗ್ ಸ್ಟರ್ ಗಳು ತೆಲಂಗಾಣಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಹೋಗುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಸರಬರಾಜು ಜಾಲವೊಂದು ಕಾರ್ಯಾಚರಿಸುತ್ತಿದ್ದು, ಅದು ಅಂಬಾಲಾ-ದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ತಾರಾ ಟೋಲ್ ಪ್ಲಾಜಾ ಮೂಲಕ ಹಾದು ಹೋಗಲಿದೆ ಎಂಬ ಮಾಹಿತಿಯನ್ನು ಗುಪ್ತಚರ ಮೂಲಗಳಿಂದ ಪಡೆದ ಪೊಲೀಸರು, ಗುರುವಾರ ಬೆಳಗ್ಗೆ 5 ಗಂಟೆ ಹೊತ್ತಿಗೆ ಹೆದ್ದಾರಿಯಲ್ಲಿ ಕಾದು ನಿಂತು ತಪಾಸಣೆ ನಡೆಸಿ ಬಂಧನ ಕಾರ್ಯಾಚರಣೆ ನಡೆಸಿದರು ಎಂದು ಪಾಣಿಪತ್ ನ ಎಸ್‌ಪಿ ಗಂಗಾರಾಮ್ ಪುನಿಯಾ ತಿಳಿಸಿದರು.
ಬಂಧಿತರಿಂದ ಒಂದು ಪಿಸ್ತೂಲ್, 30 ಕ್ಯಾಟ್ರಿಜ್‌ಗಳು, ತಲಾ 2.5 ಕೆಜಿ ತೂಕದ ಅತ್ಯಾಧುನಿಕ ಸ್ಪೋಟಕ ಸಾಧನಗಳು ಮತ್ತು ಮೂರು ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶವಾಗಿರುವ ವಾಹನ ದಿಲ್ಲಿ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಫಿರೋಜ್ ಪುರದ ವಿಂಜೋಕೆ ನಿವಾಸಿಗಳಾದ ಗುರುಪ್ರೀತ್ ಸಿಂಗ್, ಅವರ ಸಹೋದರ ಅಮನ್ ದೀಪ್ ಸಿಂಗ್, ಪರ್ಮಿಂದರ್ ಸಿಂಗ್ ಮತ್ತು ಲುಧಿಯಾನಾ ಜಿಲ್ಲೆಯ ನಿವಾಸಿ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸುಮಾರು 40 ವರ್ಷದ ಆಸುಪಾಸಿನವರು.
ಖಲಿಸ್ತಾನಿ ಸಂಪರ್ಕ ಕೊಂಡಿ
ಶಸ್ತ್ರಾಸ್ತ್ರ ಸಾಗಣೆ ತಂಡದ ನೇತೃತ್ವ ವಹಿಸಿದ್ದ ಗುರುಪ್ರೀತ್ ಸಿಂಗ್ ಈಗ ಖಲಿಸ್ತಾನಿ ಉಗ್ರನಾಗಿ ಕಾರ್ಯಾಚರಿಸುತ್ತಿರುವ ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾನೊಂದಿಗೆ ಸಂಪರ್ಕ ಹೊಂದಿದ್ದು, ಆತನ ಸೂಚನೆಯಂತೆ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ರಿಂಡಾ ಇವರಿಗೆ ಶಸ್ತ್ರಾಸ್ತ್ರ ಸರಬರಾಜುದಾರನಾಗಿದ್ದು, ಇತ್ತೀಚೆಗೆ ಡ್ರೋನ್ ಮೂಲಕ ಫಿರೋಜ್ ಪುರಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಟ್ಟಿದ್ದ ಎಂದು ಎಸ್‌ಪಿ ತಿಳಿಸಿದ್ದಾರೆ.
ಪಾಕಿಸ್ತಾನದ ಡ್ರೋನ್ ಮೂಲಕ ಬಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಾವು ತೆಲಂಗಾಣದ ಅದಿಲಾಬಾದ್ ಗೆ ಕೊಂಡೊಯ್ಯುತ್ತಿದ್ದುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ಪುನಿಯಾ ತಿಳಿಸಿದ್ದಾರೆ. ಆದರೆ, ಈ ಶಸ್ತ್ರಾಸ್ತ್ರಗಳು ನಿಜಕ್ಕೂ ತೆಲಂಗಾಣಕ್ಕೆ ಹೋಗುತ್ತಿತ್ತೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಡಿಜಿಪಿ ಪಿ.ಕೆ. ಅಗರ್ವಾಲ್ ಹೇಳಿದ್ದಾರೆ.
ಮಹಾರಾಷ್ಟ್ರಕ್ಕೂ ಶಸ್ತ್ರಾಸ್ತ್ರ ಸರಬರಾಜು
ಖಲಿಸ್ತಾನಿ ಉಗ್ರರ ಕಡೆಯಿಂದ ಗುರುಪ್ರೀತ್ ಮೂಲಕ ಸಾಗಾಣಿಕೆಯಾದ ಮೂರನೇ ಸುತ್ತಿನ ಸರಕು ಇದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅವರು ಮಹಾರಾಷ್ಟ್ರದ ನಾಂದೇಡ್ ಪಟ್ಟಣಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದರು.ಈ
ರಿಂಡಾನ ಸಹವರ್ತಿಯಾಗಿರುವ ರಾಜ್ ಬೀರ್ ಸಿಂಗ್ ಕಳೆದ ಒಂಬತ್ತು ತಿಂಗಳಿನಿಂದ ಗುರುಪ್ರೀತ್ ಜತೆಗೆ ಸಂಪರ್ಕದಲ್ಲಿದ್ದ ಎಂದು ಎಸ್ ಪಿ ತಿಳಿಸಿದ್ದಾರೆ.
ಇನ್ನೂ ಇಬ್ಬರ ಬಂಧನ
ಈ ನಡುವೆ, ಬಂಧಿತ ನಾಲ್ವರು ಗ್ಯಾಂಗ್ ಸ್ಟರ್‌ಗಳ ಜತೆ ಸಂಪರ್ಕ ಹೊಂದಿದ್ದ ಇನ್ನೂ ಇಬ್ಬರು ವ್ಯಕ್ತಿಗಳನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ.