ಸಾಂಗ್ಲಿ: ನಾಲ್ವರು ಸಾಧುಗಳಿಗೆ ಊರವರೆಲ್ಲ ಸೇರಿ ಭೀಕರವಾಗಿ ಥಳಿಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಖಾವಿ ಧಾರಿಗಳಾಗಿದ್ದ ಇವರೆಲ್ಲ ಒಟ್ಟಿಗೇ ಹೋಗುತ್ತಿದ್ದರು. ಆದರೆ ಹಳ್ಳಿಗರು ಇವರನ್ನು ಮಕ್ಕಳ ಕಳ್ಳರು ಎಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಕೂಡ ಆಗುತ್ತಿದೆ. ಹಾಗಂತ ಸಾಧುಗಳ್ಯಾರೂ ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ.
ಮೂಲತಃ ಉತ್ತರ ಪ್ರದೇಶದವರಾದ ಈ ನಾಲ್ವರು ಸಾಧುಗಳು ಕರ್ನಾಟಕದ ವಿಜಯಪುರದಿಂದ ಪಂಡರಾಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ರಾತ್ರಿಯಾಯಿತು ಎಂದು ಮಾರ್ಗ ಮಧ್ಯೆ ಮಹಾರಾಷ್ಟ್ರದ ಜಾಟ್ ತೆಹ್ಸಿಲ್ನ ಲಾವಂಗಾ ಗ್ರಾಮದ ದೇವಸ್ಥಾನವೊಂದರಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ ದೇವಸ್ಥಾನದಿಂದ ಹೊರಟಾಗ ಅಲ್ಲೊಬ್ಬ ಬಾಲಕನ ಬಳಿ ದಾರಿ ಕೇಳಿದರು. ಸಾಧುಗಳು ಹುಡುಗನ ಬಳಿ ಮಾತಾಡುತ್ತ ನಿಂತಿದ್ದನ್ನು ನೋಡಿದ ಸ್ಥಳೀಯರು ಕೆಲವರು ಅವರು ಮಕ್ಕಳ ಕಳ್ಳರು, ಬಾಲಕನಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಭಾವಿಸಿದರು. ಕೋಲು, ಬಡಿಗೆ ಹಿಡಿದು ನಾಲ್ವರಿಗೂ ಥಳಿಸಿದರು. ನಂತರ ಪೊಲೀಸರು ಬಂದು ತಪ್ಪಿಸಿದರು. ಇವರು ಮಕ್ಕಳ ಕಳ್ಳರಲ್ಲ, ಉತ್ತರ ಪ್ರದೇಶದ ಧಾರ್ಮಿಕ ಸಂಘಟನೆಗೆ ಸೇರಿದವರು ಎಂಬುದು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಹೀಗೆ ಸಾಧುಗಳನ್ನು ಥಳಿಸುವುದು ಸಾಮಾನ್ಯ ಎಂಬಂತಾಗಿದೆ. 2020ರಲ್ಲಿ ಪಾಲ್ಘರ್ನಲ್ಲಿ ಅಲ್ಲಿನ ಜನರು ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಹತ್ಯೆಗೈದಿದ್ದರು. ಯಾರದ್ದೋ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೂರತ್ನಿಂದ ಮುಂಬೈಗೆ ಹೋಗುತ್ತಿದ್ದ ಅವರನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಹೊಡೆದಿದ್ದರು. ಈ ಕೇಸ್ ಸಂಬಂಧ 100ಕ್ಕೂ ಹೆಚ್ಚು ಜನರ ಬಂಧನವೂ ಆಗಿತ್ತು.
ಇದನ್ನೂ ಓದಿ: ಕಾಳಿ ಪೋಸ್ಟರ್ ವಿವಾದ | ಜೈ ಮಾ ಕಾಳಿ! ಬೆಂಕಿಗೆ ತುಪ್ಪ ಸುರಿದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ