Site icon Vistara News

ಕುಸಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕು!

four to five days needs to rescue the workers trapped in the collapsed tunnel

ನವದೆಹಲಿ: ಸುರಂಗ ಮಾರ್ಗದಲ್ಲಿ (Tunnel Collapse) ಸಿಲುಕಿರುವ 41 ಕಾರ್ಮಿಕರನ್ನು (Worker) ರಕ್ಷಿಸುವ ಪ್ರಯತ್ನ 170 ಗಂಟೆಗಳಿಂದ ಮುಂದುವರಿದಿದ್ದು(Rescue Operation), ಇನ್ನೂ ಯಶಸ್ಸು ಸಿಕ್ಕಿಲ್ಲ. ರಕ್ಷಣಾ ಕಾರ್ಯಾಚರಣೆ ಇನ್ನೂ ನಾಲ್ಕೈದು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಯದೊಂದಿಗೆ ಸ್ಪರ್ಧೆಗಿಳಿದಿರುವ ರಕ್ಷಣಾ ತಂಡಗಳು, ಕಾರ್ಮಿಕರ ರಕ್ಷಣೆಗೆ ಅವಿರತ ಪ್ರಯತ್ನ ಪಡುತ್ತಿವೆ. ಸುರಂಗ ಕುಸಿತದ ಅವಶೇಷಗಳಲ್ಲಿ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ (Health and Wellness) ಕುರಿತು ಗಂಭೀರ ಆತಂಕಗಗಳು ಎದುರಾಗಿವೆ.

ಅಧಿಕಾರಿಗಳು ಭಾನುವಾರ ಬೆಟ್ಟದ ತುದಿಯಿಂದ ಲಂಬವಾಗಿ ರಂಧ್ರವನ್ನು ಕೊರೆಯಲು ಪ್ರಯತ್ನಿಸುತ್ತಿದ್ದಾರೆ. ಅದರ ಅಡಿಯಲ್ಲಿ ಕಾರ್ಮಿಕರು ಸೀಮಿತ ಆಹಾರ ಮತ್ತು ಸಂವಹನದೊಂದಿಗೆ ಕುಸಿದ ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಿಂದ ಹೆಚ್ಚಿನ ಕಾರ್ಯಕ್ಷಮತೆಯ ಡ್ರಿಲ್ಲಿಂಗ್ ಯಂತ್ರವನ್ನು ಸ್ಥಳಕ್ಕೆ ತರಲಾಗಿದೆ. ಬಳಿಕ ಲಂಬವಾಗಿ ಕೊರೆಯುವ ಕೆಲಸವನ್ನು ನಿನ್ನೆ ಸಂಜೆಯಿಂದಲೇ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳ ತಂಡ ಮತ್ತು ಸ್ಥಳದಲ್ಲಿ ತಜ್ಞರು 41 ಜನರನ್ನು ರಕ್ಷಿಸಲು ಐದು ಯೋಜನೆಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾರೆ. “ಒಂದು ಯೋಜನೆಯಲ್ಲಿ ಕೆಲಸ ಮಾಡುವ ಬದಲು ನಾವು ಒಂದೇ ಸಮಯದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ಸಾಧ್ಯವಾದಷ್ಟು ಬೇಗ ತಲುಪಲು ಐದು ಯೋಜನೆಗಳಲ್ಲಿ ಕೆಲಸ ಮಾಡಬೇಕು. ಈ ಅಭಿಪ್ರಾಯಕ್ಕೆ ತಜ್ಞರು ನಮ್ಮೊಂದಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಪ್ರಧಾನಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಹೇಳಿದರು.

ಸಂಸ್ಥೆಗಳ ಸಂಘಟಿತ ಪ್ರಯತ್ನದಿಂದ ಕಾರ್ಮಿಕರನ್ನು ನಾಲ್ಕೈದು ದಿನಗಳಲ್ಲಿ ರಕ್ಷಿಸುವ ಸಾಧ್ಯತೆಯಿದೆ ಎಂದು ಖುಲ್ಬೆ ಹೇಳಿದರು. ಒಂದೊಮ್ಮೆ ದೇವರು ದಯೆ ತೋರಿದರೆ ನಾಲ್ಕೈದು ದಿನಕ್ಕಿಂತ ಮುಂಚೆಯೇ ಅವರನ್ನು ರಕ್ಷಿಸಲು ಸಾಧ್ಯವಾಗಬಹುದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಸಾಧ್ಯವಿರುವ ಎಲ್ಲ ಪರಿಹಾರಗಳ ಕುರಿತು ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲ ತರಹದ ತಜ್ಞರ ತಂಡಗಳು ಇಲ್ಲಿ ಕೆಲಸ ಮಾಡುತ್ತಿವೆ ಎಂದು ಉತ್ತರಾಖಂಡ ಸಿಎಂ ಧಾಮಿ ಅವರು ಹೇಳಿದ್ದಾರೆ.

ಶುಕ್ರವಾರ ಸಂಜೆ ಡ್ರಿಲಿಂಗ್ ಮಷಿನ್ ಕೂಡಲೇ ಸ್ಥಗಿತಗೊಂಡಿತು. ಯಂತ್ರ ಮುರಿದಿರುವ ಸೌಂಡ್ ಕೇಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದರು. ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಅಲ್ಲಿ ಕಾರ್ಮಿಕರನ್ನು ರಕ್ಷಿಸಲು ಐದು ಆಯ್ಕೆಗಳನ್ನು ಕೆಲಸ ಮಾಡಲು ನಿರ್ದಿಷ್ಟ ಪರ್ಯಾಯಗಳೊಂದಿಗೆ ನಿಯೋಜಿಸಲಾದ ವಿವಿಧ ಏಜೆನ್ಸಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಕೇಂದ್ರೀಯ ಸಂಸ್ಥೆಗಳೊಂದಿಗೆ ಸಮನ್ವಯಕ್ಕಾಗಿ ಎಂಡಿ ಮಹಮೂದ್ ಅಹಮದಾಸ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

ನವೆಂಬರ್ 12ರಂದು, ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದು, 40 ಕಟ್ಟಡ ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡರು. ತೆವಳಿ ಹೊರಬಹುದಾದಂತೆ ಪೈಪ್‌ಗಳನ್ನು ಒಳತಳ್ಳಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮೇಲಿನಿಂದ ಬೀಳುತ್ತಿರುವ ಪರ್ವತದ ಮಣ್ಣಿನಿಂದಾಗಿ ಅದೂ ವಿಫಲವಾಗಿದೆ.

ಈ ಸುದ್ದಿಯನ್ನೂ ಓದಿ: ಉತ್ತರಾಖಂಡ ಸುರಂಗದಲ್ಲಿ ‌’ಎಸ್ಕೇಪ್‌ ರೂಟ್’ ಇಲ್ಲ; 41 ಜನಕ್ಕೆ ಅಪಾಯದ ಬೆನ್ನಲ್ಲೇ ಹಗರಣದ ವಾಸನೆ!

Exit mobile version