ಭೋಪಾಲ್: ಭಾರತದಲ್ಲಿ ನಶಿಸಿಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತಂದು ಕಳೆದ ವರ್ಷ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದೆ. ಆದರೆ, ಚೀತಾಗಳು ಸಂಘರ್ಷದಿಂದಾಗಿ ಮೃತಪಡುತ್ತಿದ್ದು, ಈಗ ಮತ್ತೊಂದು ಚೀತಾ ಮೃತಪಟ್ಟಿದೆ. ಚೀತಾಗಳನ್ನು ತಂದು ಉದ್ಯಾನಕ್ಕೆ ಬಿಟ್ಟಾಗಿನಿಂದ ಮೃತಪಟ್ಟ ಚೀತಾಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಹೀಗೆಯೇ ಆದರೆ, ಚೀತಾಗಳ ಸಂಖ್ಯೆಯೇ ಖಾಲಿಯಾಗಲಿದೆ ಎಂಬ ಆತಂಕ ಎದುರಾಗಿದೆ.
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಮರಿ ಮೃತಪಟ್ಟಿದ್ದು, ಚೀತಾಗಳ ನಡುವಿನ ಸಂಘರ್ಷದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್ನಲ್ಲಿ ಉದಯ್ ಎಂಬ ಚೀತಾ ಮರಣಹೊಂದಿತ್ತು. ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಈಗ ಮತ್ತೊಂದು ಚೀತಾ ಮೃತಪಟ್ಟಿದೆ.
ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭಾರತದಲ್ಲಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಎರಡನೇ ಹಂತದಲ್ಲಿ 12 ತರಲಾಗಿತ್ತು. ಈ ಚೀತಾಗಳನ್ನು ಹಂತಹಂತವಾಗಿ ವಿಶಾಲವಾದ ಕಾಡಿಗೆ ಬಿಡಲಾಗುತ್ತಿದೆ. ಅಂದರೆ ರಾಷ್ಟ್ರೀಯ ಉದ್ಯಾನವನದಲ್ಲಿ, ಸುತ್ತಲೂ ಬೇಲಿಯಿದ್ದ ಜಾಗದಲ್ಲಿ ಸದ್ಯ ಅವುಗಳನ್ನು ಇರಿಸಲಾಗಿತ್ತು, ನಂತರ ಬೇಲಿಯಾಚೆಗಿನ ವಿಶಾಲ ಕಾಡಿಗೆ ಬಿಡಲಾಗುತ್ತದೆ. ಈಗಾಗಲೇ ನಾಲ್ಕು ಚೀತಾಗಳನ್ನು ಹಾಗೆ ಕಾಡಿಗೆ ಬಿಡಲಾಗಿದ್ದು, ಮಾನ್ಸೂನ್ ಒಳಗೆ ಇನ್ನೂ ಐದು ಚೀತಾಗಳನ್ನು ಬಿಡುವುದಾಗಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಚೀತಾಗಳನ್ನು ರಾಜಸ್ಥಾನದಲ್ಲಿ ಬಿಡಿ, ಪ್ರತಿಪಕ್ಷದ ಆಡಳಿತ ಇದೆ ಎಂದು ನಿರಾಕರಿಸಬೇಡಿ; ಸುಪ್ರೀಂಕೋರ್ಟ್ ಸೂಚನೆ
ಮುಂಬರುವ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನಷ್ಟು ಚೀತಾಗಳನ್ನು ಮಧ್ಯಪ್ರದೇಶಕ್ಕೆ ತರುವ ಯೋಜನೆ ಇದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಆದರೂ ಇಲ್ಲಿಗೆ ಬಂದ ಚೀತಾಗಳು ಸಾವನ್ನಪ್ಪುವುದು ಆತಂಕ ತಂದೊಡ್ಡಿದೆ. ಮಾರ್ಚ್ ತಿಂಗಳಲ್ಲಿ ಸಾಶಾ ಕಿಡ್ನಿ ಸೋಂಕಿಗೆ ಒಳಗಾಗಿ, ಅದರಿಂದಲೇ ಮೃತಪಟ್ಟಿತ್ತು. ಜನವರಿಯಿಂದಲೇ ಅದಕ್ಕೆ ಅನಾರೋಗ್ಯ ಕಾಡುತ್ತಿತ್ತು. ಅದಾದ ಮೇಲೆ ಏಪ್ರಿಲ್ನಲ್ಲಿ ಉದಯ್ ಚೀತಾ ಕೂಡ ಅಸ್ವಸ್ಥಗೊಂಡಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ.