ನವದೆಹಲಿ: ಊಟ ಮಾಡುವಾಗ, ಗೆಳೆಯರ ಜತೆ ಕುಳಿತಾಗ, ಮನೆಯಲ್ಲಿ ಸಂಬಂಧಿಕರು ನೆರೆದಿದ್ದಾಗ ಸೇರಿ ಯಾವುದೇ ಸಂದರ್ಭದಲ್ಲೂ ಮೊಬೈಲ್ ಕೈಯಲ್ಲಿ ಇರಲೇಬೇಕು. ಒಂದೋ ಹರಟುತ್ತಿರಬೇಕು, ಇಲ್ಲವೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀಲ್ಸ್‌ಗಳನ್ನು ನೋಡುತ್ತಿರಬೇಕು. ಇನ್ನೂ ಒಂದಷ್ಟು ಜನ ಬೈಕ್ ಚಲಾಯಿಸುವಾಗಲೂ ಮೊಬೈಲ್ (Mobile Addiction) ಬಳಸುತ್ತಾರೆ. ಹೀಗೆ ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತಿದ್ದವನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ (Bike Accident) ಹೊಡೆದಿದೆ. ಇದರ ಭೀಕರ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಹೌದು, ಯುವಕರಿಬ್ಬರು ರಸ್ತೆ ದಾಟಲು ಬಂದಾಗ ವಾಹನ ಇರುವ ಕಾರಣ ಅವರು ಅಲ್ಲಿಯೇ ಬೈಕ್ ನಿಲ್ಲಿಸುತ್ತಾರೆ. ಆದರೆ, ಪಕ್ಕದಲ್ಲೇ ಬಂದ ಬೈಕ್ ಸವಾರನು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಲಾರಿಯನ್ನು ನೋಡಿಲ್ಲ. ಹಾಗೆಯೇ, ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತ ರಸ್ತೆ ದಾಟುತ್ತಿರುವಾಗಲೇ ವೇಗವಾಗಿ ಬಂದ ಲಾರಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಅಪ್ಪಚ್ಚಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇಲ್ಲಿದೆ ಅಪಘಾತದ ವಿಡಿಯೊ
ವಿಡಿಯೊವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಹಂಚಿಕೊಂಡಿದ್ದಾರೆ. ಆದರೆ, ಅಪಘಾತ ನಡೆದ ದಿನಾಂಕ ಹಾಗೂ ಸ್ಥಳದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ವೇಗವಾಗಿ ಬಂದ ಲಾರಿ ಗುದ್ದುವ ವಿಡಿಯೊ ಮಾತ್ರ ಭಯ ಹುಟ್ಟಿಸುವಂತಿದೆ. ವಿಡಿಯೊ ವೈರಲ್ ಆಗುತ್ತಲೇ ಸುಮಾರು 8 ಲಕ್ಷಕ್ಕೂ ಅಧಿಕ ಜನ ಅಪಘಾತದ ದೃಶ್ಯವನ್ನು ವೀಕ್ಷಿಸಿದ್ದಾರೆ. ಹಾಗೆಯೇ, ಕಮೆಂಟ್ ಮೂಲಕ ಅಚ್ಚರಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Organ donation: ಸಾವಿನಲ್ಲೂ ಸಾರ್ಥಕತೆ, ಅಪಘಾತದಲ್ಲಿ ಮೃತ ಯುವಕನ ಅಂಗದಾನ
ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ
ಬೈಕ್ ಓಡಿಸುವಾಗ, ಕಾರು ಚಾಲನೆ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್‌ನಲ್ಲಿ ಮಾತನಾಡುವುದು, ಬೈಕ್ ಚಲಾಯಿಸುವಾಗ ಇಯರ್‌ಬಡ್ಸ್ ಹಾಕಿಕೊಂಡು ಹಾಡು ಕೇಳುವುದು ಮಾಡಬಾರದು ಎಂದು ಈಗಾಗಲೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ನಿಮಗಾಗಿ ಮನೆಯಲ್ಲಿ ತಂದೆ-ತಾಯಿ, ಪತ್ನಿ, ಮಕ್ಕಳು ಕಾಯುತ್ತಿರುತ್ತಾರೆ. ಅವರ ಮುಖವನ್ನಾದರೂ ಮನಸ್ಸಿನಲ್ಲಿ ಇಟ್ಟುಕೊಂಡು ವಾಹನ ಚಲಾಯಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಸಲಹೆ ನೀಡಿದ್ದಾರೆ.