Site icon Vistara News

80 ಕೋಟಿ ಬಡವರಿಗೆ ಉಚಿತ ಪಡಿತರ ಇನ್ನೂ ಮೂರು ತಿಂಗಳು ವಿಸ್ತರಣೆ

ration shop

ನವ ದೆಹಲಿ: ದೇಶದ ಸುಮಾರು 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುವಿಕೆಯನ್ನು ಇನ್ನೂ 3-6 ತಿಂಗಳುಗಳವರೆಗೆ ಸರ್ಕಾರ ಮುಂದುವರಿಸಲಿದೆ ಎಂದು ತಿಳಿದುಬಂದಿದೆ.

ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಜಾಗತಿಕ ಪೂರೈಕೆ ಸರಪಳಿಯ ಅಸ್ತವ್ಯಸ್ತತೆ ಇತ್ಯಾದಿಗಳಿಂದಾಗಿ ಹೆಚ್ಚಿನ ಹಣದುಬ್ಬರದ ಕಾರಣದಿಂದ ಈ ವಿಸ್ತರಣೆ ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಈ ಯೋಜನೆಯನ್ನು ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಗಿತ್ತು ಮತ್ತು ಮಾರ್ಚ್‌ನಲ್ಲಿ ಆರನೇ ಬಾರಿಗೆ ವಿಸ್ತರಿಸಲಾಗಿತ್ತು. ಸೆಪ್ಟೆಂಬರ್ 30ರಂದು ಇದು ಮುಕ್ತಾಯಗೊಳ್ಳಲಿತ್ತು. ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದ ವಿನಾಶಕಾರಿ ಪರಿಣಾಮಗಳು ಇನ್ನೂ ಮುಗಿದಿಲ್ಲ. ಹೀಗಾಗಿ ಬಡವರಿಗೆ ಈ ಯೋಜನೆಯನ್ನು ವಿಸ್ತರಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಎಂಬ ಹೆಸರಿನ ಇದಕ್ಕಾಗಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ ಎಂದು ತಿಳಿದುಬಂದಿದೆ. PMGKAY ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ತಮ್ಮ ಸಾಮಾನ್ಯ ಆಹಾರ ಧಾನ್ಯಗಳ ಕೋಟಾದ ಜೊತೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರವನ್ನು ಪಡೆಯುತ್ತಾರೆ. NFSA ಅಡಿಯಲ್ಲಿ, ದೇಶದ ಸುಮಾರು 75% ಗ್ರಾಮೀಣ ಮತ್ತು 50% ನಗರ ಜನಸಂಖ್ಯೆಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ.

PMGKAY ಸಂಕಷ್ಟದ ಸಮಯದಲ್ಲಿ ಆರ್ಥಿಕತೆಗೆ ಸಹಾಯ ಮಾಡಿದೆ. ಮಾರ್ಚ್ 2020ರಲ್ಲಿ ಪ್ರಾರಂಭಿಸಲಾದ PMGKY ಯೋಜನೆಯಲ್ಲಿ ಉಚಿತ ಆಹಾರ (PMGKAY), ಅಡುಗೆ ಅನಿಲ ಮತ್ತು ನಗದು ಸಬ್ಸಿಡಿಗಳಿವೆ. ಹಣದುಬ್ಬರ ಮತ್ತಷ್ಟು ಕಡಿಮೆಯಾಗುವವರೆಗೆ ಮತ್ತು ಆರಾಮದಾಯಕ ಮಟ್ಟಕ್ಕೆ ಮರಳುವವರೆಗೆ PMGKAY ಯೋಜನೆಯನ್ನು ಇನ್ನೂ ಒಂದು ಅಥವಾ ಎರಡು ತ್ರೈಮಾಸಿಕಗಳಿಗೆ ವಿಸ್ತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ ಬಳಿಕ ಉಚಿತ ಪಡಿತರ ಯೋಜನೆಯ ವಿಸ್ತರಣೆಗೆ ಹಣಕಾಸು ಸಚಿವಾಲಯದ ಆಕ್ಷೇಪ

Exit mobile version