Site icon Vistara News

West Bengal: ಬಂಗಾಳದಲ್ಲಿ ಮತದಾನದ ವೇಳೆ ಹಿಂಸೆ; ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ!

West Bengal

Fresh clashes in West Bengal as India votes in Round 3 of Lok Sabha Election

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಹಿಂಸಾಚಾರ, ಕೊಲೆ, ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡವೆ ಗಲಾಟೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೂರನೇ ಹಂತದ ಮತದಾನದ (Lok Sabha Election 2024) ವೇಳೆಯೂ ಪಶ್ಚಿಮ ಬಂಗಾಳದಲ್ಲಿ (West Bengal) ಹಿಂಸಾಚಾರ ನಡೆದಿದೆ. ಮುರ್ಷಿದಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್‌ ಘೋಷ್‌ (Dhananjay Ghosh) ಅವರು ಮತ ಚಲಾಯಿಸಲು ಹೋದಾಗ ಗಲಾಟೆ ನಡೆದಿದೆ.

ಮುರ್ಷಿದಾಬಾದ್‌ನಲ್ಲಿ ಧನಂಜಯ್‌ ಘೋಷ್‌ ಅವರು ಮತದಾನ ಮಾಡಲು ಹೋದಾಗ ಅವರನ್ನು ಬೂತ್‌ ಏಜೆಂಟ್‌ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ‌ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್‌ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್‌ ಘೋಷ್‌ ತಿಳಿಸಿದ್ದಾರೆ.

ಮುರ್ಷಿದಾಬಾದ್‌ ಲೋಕಸಭೆ ಕ್ಷೇತ್ರದ ರಾಬಿನಗರದಲ್ಲೂ ಗಲಾಟೆ ನಡೆದಿದೆ. ಕಾಂಗ್ರೆಸ್‌-ಎಡಪಕ್ಷದ ಜಂಟಿ ಅಭ್ಯರ್ಥೀ ಮೊಹಮ್ಮದ್‌ ಸಲೀಂ ಎಂಬುವರು ನಕಲಿ ಬೂತ್‌ ಏಜೆಂಟ್‌ ಒಬ್ಬನನ್ನು ಹಿಡಿದು ಹಾಕಿದ್ದಾನೆ ಎಂದಿದ್ದಾರೆ. ಇದಾದ ಬಳಿಕ, ಸಲೀಂ ವಿರುದ್ಧ ಗೋ ಬ್ಯಾಕ್‌ ಎಂಬ ಘೋಷಣೆ ಕೂಗಿದ್ದು, ನಂತರ ಗಲಾಟೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 1 ಗಂಟೆ ಸುಮಾರಿಗೆ ಶೇ.49.27ರಷ್ಟು ಮತದಾನ ದಾಖಲಾಗಿದೆ. ಇನ್ನು, ಮಹಾರಾಷ್ಟ್ರದಲ್ಲಿ ಇದೇ ವೇಳೆಗೆ ಶೇ.31.55ರಷ್ಟು ಮತದಾನ ದಾಖಲಾಗಿದೆ. ಬಂಗಾಳದ 4 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮುರ್ಷಿದಾಬಾದ್‌ ಸೇರಿ ನಾಲ್ಕರಲ್ಲೂ ಟಿಎಂಸಿಯೇ ಬಲಿಷ್ಠವಾಗಿದೆ.

ಮಂಗಳವಾರ ಬೆಳಗ್ಗೆ ಮತದಾನ ಆರಂಭವಾಗುತ್ತಲೇ ಹಕ್ಕು ಚಲಾಯಿಸಿದ ಮೋದಿ, ಎಲ್ಲರೂ ಮತ ಹಾಕುವಂತೆ ಕರೆ ನೀಡಿದರು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜಕೀಯ ಹಿಂಸಾಚಾರ; ಸವದಿ ಆಪ್ತರೂ ಆದ ಕಾಂಗ್ರೆಸ್‌ ಮುಖಂಡನ ಹತ್ಯೆ

Exit mobile version