Site icon Vistara News

Electoral Bonds: ಚುನಾವಣಾ ಬಾಂಡ್‌ಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗ; ಇದರಲ್ಲಿ ಏನಿದೆ?‌

electoral bonds and parties

Parties That Did Not Get Any Funding Through Electoral Bonds Scheme; Here Is The List

ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಆದಾಯ ಲಭಿಸಿರುವ ಚುನಾವಣಾ ಬಾಂಡ್‌ಗಳ (Electoral Bonds) ಕುರಿತು ಚುನಾವಣೆ ಆಯೋಗವು (Election Commission) ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (State Bank Of India) ನೀಡಿದ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ (Supreme Court) ಚುನಾವಣೆ ಆಯೋಗಕ್ಕೆ ನೀಡಿದ್ದು, ಈ ಮಾಹಿತಿಯನ್ನು ಚುನಾವಣೆ ಆಯೋಗವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

“ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಿದೆ. ಹಾರ್ಡ್‌ ಕಾಪಿಯ ಜತೆಗೆ ಸೀಲ್‌ ಮಾಡಿರುವ ಕವರ್‌ನಲ್ಲಿ ಪೆನ್‌ಡ್ರೈವ್‌ ಇರಿಸಿ ಡೇಟಾ ಹಂಚಿಕೊಂಡಿದೆ. ಇದನ್ನು ಚುನಾವಣೆ ಆಯೋಗವು ಭಾನುವಾರ (ಮಾರ್ಚ್‌ 17) ಡಿಜಿಟಲೈಸ್‌ ಆಗಿರುವ ದತ್ತಾಂಶವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ” ಎಂದು ಚುನಾವಣಾ ಆಯೋಗವು ಪ್ರಕಟಣೆ ತಿಳಿಸಿದೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಇದಕ್ಕಾಗಿ ಕೋರ್ಟ್‌ ಚಾಟಿ ಬೀಸಿತ್ತು.

ಹೊಸ ಮಾಹಿತಿ ಏನಿದೆ?

ಸುಪ್ರೀಂ ಕೋರ್ಟ್‌ ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಬಾಂಡ್‌ಗಳು, ದೇಣಿಗೆಯ ವಿಶೇಷ ಸಂಖ್ಯೆಯನ್ನು ನಮೂದಿಸಿಲ್ಲ. 2019ಕ್ಕಿಂತ ಮೊದಲು ಖರೀದಿಯಾದ ಬಾಂಡ್‌ಗಳ ಕುರಿತು ಮಾಹಿತಿ ನೀಡಲಾಗಿದೆ. ಚುನಾವಣಾ ಬಾಂಡ್‌ಗಳು ಮಾರಾಟವಾದ ದಿನಾಂಕ, ಬಾಂಡ್‌ಗಳ ಸಂಖ್ಯೆ, ಯಾವ ಬ್ರ್ಯಾಂಚ್‌ ಮೂಲಕ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ, ಹಣ ಕ್ರೆಡಿಟ್‌ ಆದ ದಿನಾಂಕದ ಮಾಹಿತಿಯಷ್ಟೇ ಒಳಗೊಂಡಿದೆ. ಆದರೆ, ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ದೊರೆತಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Amit Shah: ಚುನಾವಣಾ ಬಾಂಡ್‌ನಿಂದ ಬಿಜೆಪಿಗೆ ಲಭಿಸಿದ್ದು ₹ 6,000 ಕೋಟಿ; ಉಳಿದ ಮೊತ್ತ ಎಲ್ಲಿ ಹೋಯ್ತು? ಅಮಿತ್ ಶಾ ಪ್ರಶ್ನೆ

ಫೆಬ್ರವರಿ 15ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಮಾರ್ಚ್ 13ರೊಳಗೆ ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version