ಗುವಾಹಟಿ, ಅಸ್ಸಾಮ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಸಂಭವಿಸಿದೆ(Manipur Violence). ಮಣಿಪುರದ ಸಂಘರ್ಷಪೀಡಿತ ಬಿಷ್ಣುಪುರ್ ಜಿಲ್ಲೆ ಮತ್ತು ಚುರಾಚಂದಪುರ ಜಿಲ್ಲೆಯ ಕಾಂಗ್ವೈ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಿಂಸಾಚಾರ ನಡೆದಿದೆ. ಈ ವೇಳೆ, ಆಟೋಮೆಟಿಕ್ ಆಯುಧಗಳನ್ನು (Automatic weapons) ಬಳಸಲಾಗಿದೆ. ಬೆಳಗಿನ ಜಾವದವರೆಗೂ ಗುಂಡಿನ ಮೊರೆತಗಳು ಕೇಳಿ ಬಂದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಾಗದ ಅನೇಕ ಕಡೆ ಗುಂಪು ಘರ್ಷಣೆ, ಹಲವೆಡೆ ಬೆಂಕಿ ಹಚ್ಚುವ ಪ್ರಯತ್ನಗಳು ಕೂಡ ನಡೆದಿವೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸೇನೆಯ ಜಂಟಿ ಪಡೆ, ಅಸ್ಸಾಮ್ ರೈಫಲ್ಸ್, ಕ್ಷಿಪ್ರ ಕ್ರಿಯಾ ಪಡೆ ಮತ್ತು ರಾಜ್ಯ ಪೊಲೀಸರು ಇಂಫಾಲ್ ಪೂರ್ವದಲ್ಲಿ ಪಥ ಸಂಚಲನ ನಡೆಸಿ, ಭದ್ರತೆಯ ಭರವಸೆಯನ್ನು ನೀಡಿದರು. ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ. ಸುಮಾರು 1,000 ಜನರ ಗುಂಪು ನಿನ್ನೆ ಸಂಜೆ ಒಟ್ಟುಗೂಡಿತು ಮತ್ತು ಬೆಂಕಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿತು. ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿತು, ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಮಣಿಪುರ ವಿಶ್ವವಿದ್ಯಾಲಯದ ಬಳಿ ಗುಂಪು ಕೂಡ ನೆರೆದಿತ್ತು. ಸುಮಾರು 200ರಿಂದ 300ವರೆಗಿನ ಜನರು ಥೋಂಗ್ಜು ಬಳಿ ಸೇರಿ, ಸ್ಥಳೀಯ ಶಾಸಕನ ಮನೆಯನ್ನು ಧ್ವಂಸಗೊಳಿಸುವ ಪ್ರಯತ್ನವನ್ನು ಮಾಡಿದರು. ಬಳಿಕ ಕ್ಷಿಪ್ರ ಕ್ರಿಯಾ ಪಡೆಯು ಈ ಗುಂಪನ್ನು ಚದುರಿಸಿತು. ಮತ್ತೊಂದು ಗುಂಪು ಕಳೆದ ರಾತ್ರಿ, ಇಂಫಾಲ್ ವೆಸ್ಟ್‌ನಲ್ಲಿರುವ ಇರಿಂಗ್‌ಬಾಮ್ ಪೊಲೀಸ್ ಠಾಣೆಯ ಆಯುಧಾಗಾರವನ್ನು ನಾಶ ಪಡಿಸುವ ಪ್ರಯತ್ನವನ್ನು ಮಾಡಿತು. ಠಾಣೆಯನ್ನು ಒತ್ತೆಯಾಗಿಸಲು ಹೊರಟಿದ್ದ ಗಂಪನ್ನು ಕ್ಷಿಪ್ರ ಕ್ರಿಯಾ ಪಡೆಯು ಚದುರಿಸಿದೆ.
ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಉದ್ವಿಗ್ನ; ಕೇಂದ್ರ ಸಚಿವ ರಂಜನ್ ಸಿಂಗ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಇದೇ ವೇಲೆ, ಸಿಂಜೆಮೈನಲ್ಲಿರುವ ಬಿಜೆಪಿ ಪಕ್ಷದ ಕಚೇರಿ ಬಳಿ ಸುಮಾರು 200ರಿಂದ 300 ಜನರು ಸೇರಿ ಧ್ವಂಸ ಮಾಡಲು ಹೊರಟಿದ್ದರು. ಸೇನಾ ತುಕಡಿಯೊಂದು ಈ ಗುಂಪನ್ನು ಚದುರಿಸಿದೆ. ಮಧ್ಯರಾತ್ರಿ ಇಂಫಾಲ್ ವೆಸ್ಟ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ ಅವರ ನಿವಾಸವನ್ನು ಗುಂಪು ಧ್ವಂಸ ಮಾಡಲು ಪ್ರಯತ್ನಿಸಿತು, ಆದರೆ ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆಯಿತು. ಸೇನೆಯ ಮೂಲಗಳ ಪ್ರಕಾರ ಗುಂಪನ್ನು ಚದುರಿಸಲಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.