ನವ ದೆಹಲಿ: ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವ ಸಲುವಾಗಿ ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಈ ಕ್ರಮದಿಂದಾಗಿ ತಂಪು ಪಾನೀಯ ತಯಾರಕರಾದ ಫ್ರೂಟಿ, ಮಾಜಾ, ಟ್ರೋಫಿಕಾನಾ ಕಂಪನಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಈ ಪಾನೀಯಗಳ ಸಣ್ಣ ಟೆಟ್ರಾ ಪ್ಯಾಕ್ ಮಾರುಕಟ್ಟೆಗೆ ಬರುವ ಸಾಧ್ಯತೆ ಕ್ಷೀಣವಾಗಿದೆ.
ಪ್ಲಾಸ್ಟಿಕ್ ಸ್ಟ್ರಾಗಳಿಗೆ ಪರ್ಯಾಯವಾಗಿ ಪೇಪರ್ ಸ್ಟ್ರಾವನ್ನು ಬಳಸುವುದು ಅಥವಾ ಜ್ಯೂಸ್ ಬಾಟಲ್‌ನ್ನು ಮರು ವಿನ್ಯಾಸಗೊಳಿಸುವುದು ಸಹ ಕಷ್ಟಕರವಾಗಿದ್ದು, ಇದರಿಂದಾಗಿ ಕಂಪನಿಗಳು 10 ರೂಪಾಯಿಯ ಜ್ಯೂಸ್ ಪ್ಯಾಕೆಟ್‌ಗಳ ಸ್ಥಗಿತವಾಗುವ ಸಾಧ್ಯತೆ ಇದ್ದು, ಜ್ಯೂಸ್ ದರ ಹೆಚ್ಚಾಗುವ ಸಾಧ್ಯತೆಯೂ ಕೂಡ ಇದೆ. ಅಲ್ಲದೆ ದೇಶದಲ್ಲಿ ಪೇಪರ್ ಸ್ಟ್ರಾಗಳ ಅಲಭ್ಯತೆ ಇರುವುದರಿಂದ ಬೇರೆ ದೇಶಗಳಿಂದ ಪೇಪರ್ ಸ್ಟ್ರಾಗಳನ್ನು ಆಮದು ಮಾಡಿಕೊಳ್ಳುವ ಒತ್ತಡ ಕಂಪನಿಗಳ ಮೇಲೆ ಬೀಳಲಿದೆ.
ಇದನ್ನು ಓದಿ| GOOD NEWS: ರೆಸ್ಟೊರೆಂಟ್‌ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸಲು ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಕಾನೂನು ಜಾರಿ
ಈ ಹಿಂದೆ ಫ್ರೂಟಿ ಮತ್ತು Appy ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸುವ ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಆದರೂ ಕೇಂದ್ರ ಸರ್ಕಾರ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ತಿರ್ಮಾನಿಸಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾರ್ಲೆ ಆಗ್ರೋ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ತರಾತುರಿ ನಿಷೇಧ ಎಂದು ಕರೆದಿದೆ. ಇದು ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ನ ಒಟ್ಟಾರೆ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಈ ಅನುಷ್ಟಾವನ್ನು ಆರು ತಿಂಗಳು ಮುಂದೂಡುವಂತೆ ಕಂಪನಿ ಮನವಿ ಮಾಡಿಕೊಂಡಿದೆ.
ಪ್ರತಿವರ್ಷ ದೇಶದಲ್ಲಿ ಒಟ್ಟು 6 ಶತಕೋಟಿ ಪ್ಯಾಕ್‌ಗಳ ಜ್ಯೂಸ್ ಬಾಕ್ಸ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಪಾರ್ಲೆ ಆಗ್ರೋ ಸೇರಿದಂತೆ ಕೋಕಾ ಕೋಲಾ ಮತ್ತು ಪೆಪ್ಸಿಕೋ ತಮ್ಮ ಉತ್ಪಾದನೆಯಲ್ಲಿ ಸುಮಾರು 60 ಪ್ರತಿಶತದಷ್ಟು ಸಣ್ಣ ಜ್ಯೂಸ್ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುತ್ತವೆ. ಆದರೆ, ಪೇಪರ್ ಸ್ಟ್ರಾಗಳಂತಹ ಪರ್ಯಾಯಗಳನ್ನು ಒದಗಿಸಲು ಲಭ್ಯವಿರುವ ಸಾಮರ್ಥ್ಯವು ದಿನಕ್ಕೆ 1.3 ಯೂನಿಟ್‌ಗಳು ಇದು ನಿಜವಾದ ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿದೆ ಎಂದು ಪಾರ್ಲೆ ಆಗ್ರೋ ಹೇಳಿದೆ.
ಇದನ್ನು ಓದಿ| GOOD NEWS: ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಜುಲೈನಲ್ಲಿ ಏರಿಕೆ ಸಾಧ್ಯತೆ
ಇನ್ನು ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಮುಂದೂಡುವಂತೆ ಅಮುಲ್ ಸಂಸ್ಥೆ ಕೂಡ ಪರಿಸರ ಸಚಿವಾಲಯವನ್ನು ಕೋರಿದೆ. ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಪರ್ ಸ್ಟ್ರಾಗಳ ಸಮರ್ಪಕ ಲಭ್ಯತೆಯ ಕೊರತೆಯಿಂದಾಗಿ ಪ್ಲಾಸ್ಟಿಕ್ ಮೇಲೆ ವಿಧಿಸಿರುವ ನಿಷೇಧವನ್ನು 1 ವರ್ಷದವರೆಗೂ ಮುಂದೂಡುವಂತೆ ಅಮುಲ್ ಸಂಸ್ಥೆ ಪರಿಸರ ಸಚಿವಾಲಯದ ಬಳಿ ಕೇಳಿಕೊಂಡಿತ್ತು. ಆದ್ರೂ ಸಹ ಕೇಂದ್ರ ಸರ್ಕಾರ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಅನುಮೋದನೆ ನೀಡಿದ್ದು, ಜ್ಯೂಸ್ ತಯಾರಕ ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ.