ನವದೆಹಲಿ: ದೇಶದ ಶಕ್ತಿಕೇಂದ್ರವಾಗಲಿರುವ ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (May 28) ಉದ್ಘಾಟನೆ ನೆರವೇರಿಸಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಉತ್ತಮ ಆಸನ ವ್ಯವಸ್ಥೆ ಸೇರಿ ಸಕಲ ಸೌಕರ್ಯಗಳಿರುವ ನೂತನ ಸಂಸತ್ ಭವನದ ನಿರ್ಮಾಣಕ್ಕೆ ದೇಶದ ಹತ್ತಾರು ಭಾಗಗಳಿಂದ ಕಲ್ಲು, ಮಾರ್ಬಲ್ ಸೇರಿ ಹಲವು ವಸ್ತುಗಳನ್ನು ಬಳಸಲಾಗಿದೆ. ದೇಶದ ಮೂರ್ತರೂಪವಾಗಿ ಸಂಸತ್ ಭವನ ತಲೆ ಎತ್ತಿದ್ದು, ಇದಕ್ಕಾಗಿ ದೇಶದ ಯಾವ ಭಾಗದಿಂದ ಯಾವ ವಸ್ತುವನ್ನು ಬಳಸಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ.
ಸಂಸತ್ ಭವನಕ್ಕೆ ಯಾವ ಭಾಗದಿಂದ ಯಾವ ವಸ್ತು ಬಳಕೆ?
- ರಾಜಸ್ಥಾನದ ಸರ್ಮಥುರದಿಂದ ಕೆಂಪು ಹಾಗೂ ಬಿಳಿಯ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ನೂತನ ಸಂಸತ್ ಭವನ ನಿರ್ಮಿಸಲಾಗಿದೆ. ದೆಹಲಿಯಲ್ಲಿ ಕೆಂಪುಕೋಟೆ ಹಾಗೂ ಹುಮಾಯುನ್ ಸಮಾಧಿಯನ್ನು ಇದೇ ಶಿಲೆಗಳಿಂದ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ.
- ನೂತನ ಸಂಸತ್ ಭವನದ ನಿರ್ಮಾಣದ ವೇಳೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಹೆಚ್ಚಾಗಿ ಸಿಗುವ ತೇಗದ ಮರದ ತುಂಡುಗಳನ್ನು ಬಳಸಲಾಗಿವೆ. ಇವು ಕಟ್ಟಡದ ಅಂದ ಹೆಚ್ಚಿಸುವ ಜತೆಗೆ ದೀರ್ಘ ಬಾಳಿಕೆಗೆ ಹೆಸರಾಗಿವೆ.
- ಸಂಸತ್ ಭವನದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ರಾಜಸ್ಥಾನದ ಅಜ್ಮೇರ್ ಬಳಿಯ ಲಾಖದಿಂದ ಕೇಶರಿಯಾ ಹಸಿರು ಶಿಲೆ, ಕೆಂಪು ಗ್ರಾನೈಟ್ ಹಾಗೂ ಅಂಬಾಜಿಯಿಂದ ಬಿಳಿ ಅಮೃತಶಿಲೆಗಳನ್ನು ಬಳಸಲಾಗಿದೆ.
- ಸಂಸತ್ ಭವನದ ಒಳಗಡೆಯ ಪೀಠೋಪಕರಣಗಳನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಕೆತ್ತಲಾಗಿದೆ. ಇದರಿಂದ ಸಂಸತ್ ಭವನದ ಆಕರ್ಷಣೆ ಹೆಚ್ಚಾಗಿದೆ.
- ಲೋಕಸಭೆ ಹಾಗೂ ರಾಜ್ಯಸಭೆಯ ಸೀಲಿಂಗ್‌ಗಳಿಗೆ ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯುನ ಉಕ್ಕಿನ ಉಪಕರಣಗಳನ್ನು ಬಳಸಲಾಗಿದೆ.
- ಕಟ್ಟಡದ ಅಂದವನ್ನು ಹೆಚ್ಚಿಸುವ, ಜಾಲಿ ಎಂದೇ ಖ್ಯಾತಿಯಾದ ಕಲ್ಲುಗಳನ್ನು ರಾಜಸ್ಥಾನದ ರಾಜನಗರ ಹಾಗೂ ಉತ್ತರ ಪ್ರದೇಶದ ನೊಯ್ಡಾದಿಂದ ತರಿಸಿ, ಬಳಸಲಾಗಿದೆ.
- ಲೋಕಸಭೆ ಹಾಗೂ ರಾಜ್ಯಸಭೆಯ ಗೋಡೆಗಳ ಮೇಲೆ ಅಶೋಕ ಚಕ್ರಗಳನ್ನು ಸುಂದರವಾಗಿ ಕೆತ್ತಿಸಲು ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ರಾಜಸ್ಥಾನದ ಜೈಪುರದಿಂದ ಶಿಲೆಗಳನ್ನು ತರಿಸಲಾಗಿದೆ.
- ರಾಜಸ್ಥಾನದ ಅಬುರೋಡ್ (ನಗರ) ಹಾಗೂ ಉದಯಪುರದ ಕೌಶಲಯುತ ಶಿಲ್ಪಿಗಳು ರಾಜಸ್ಥಾನದ ಕೊಟ್ಪುಟಲಿ ಶಿಲೆಗಳನ್ನು ಸುಂದರವಾಗಿ ಕೆತ್ತಿದ್ದಾರೆ.
- ನಿರ್ಮಾಣ ಚಟುವಟಿಕೆಗಳಿಗಾಗಿ ಹರಿಯಾಣದ ಚರ್ಖಿ ದಾದ್ರಿಯಿಂದ ಎಂ-ಸ್ಯಾಂಡ್‌ಅನ್ನು ಬಳಸಲಾಗಿದೆ. ಎಂ-ಸ್ಯಾಂಡ್‌ಗೆ ಗುಣಮಟ್ಟದ ಕಾಂಕ್ರೀಟ್‌ಅನ್ನು ಮಿಕ್ಸ್ ಮಾಡಲಾಗಿದೆ.
- ಪರಿಸರ ಸ್ನೇಹಿ ಎನಿಸುವ ಇಟ್ಟಿಗೆಗಳನ್ನು ಹರಿಯಾಣ ಹಾಗೂ ಉತ್ತರ ಪ್ರದೇಶದಿಂದ ತರಿಸಿ ಬಳಸಲಾಗಿದೆ. ವಾಸ್ತುಶಿಲ್ಪಕ್ಕಾಗಿ ಗುಜರಾತ್‌ನ ಅಹ್ಮದಾಬಾದ್‌ನಿಂದ ಹಿತ್ತಾಳೆ ಉತ್ಪನ್ನಗಳನ್ನು ತರಿಸಲಾಗಿದೆ.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ವೈಭವ ಹೇಗಿದೆ? ಇಲ್ಲಿದೆ ಅದ್ಭುತ ವಿಡಿಯೊ!