ನವದೆಹಲಿ: ಈ ಬಾರಿಯ ಜನವರಿ 26ರಂದು ದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ (Republic Day 2023) ಭಿನ್ನವಾಗಿರಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಪರೆಡ್ ನಡೆಯುವ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಗಣ್ಯವ್ಯಕ್ತಿಗಳಿಗೆ, ವಿದೇಶಿ ಪ್ರತಿನಿಧಿಗಳಿಗೆ ಆಸನ ಕಲ್ಪಿಸಲಾಗಿರುತ್ತದೆ. ಆದರೆ, ಈ ಬಾರಿ ವಿಶೇಷ ಅತಿಥಿಗಳು ಆಸೀನರಾಗಲಿದ್ದಾರೆ! ಆ ಅತಿಥಿಗಳು ಬೇರೆ ಯಾರೂ ಅಲ್ಲ; ಸೆಂಟ್ರಲ್ ವಿಸ್ತಾಗೆ ದುಡಿದ ಕಾರ್ಮಿಕರು, ರಿಕ್ಷಾವಾಲಾಗಳು, ತರಕಾರಿ ಮಾರಾಟಗಾರರು, ಸಣ್ಣ ದಿನಿಸಿ ವ್ಯಾಪಾರಸ್ಥರು ಮತ್ತು ಅವರ ಕುಟುಂಬಸ್ಥರು. ಇವರೆಲ್ಲ ಮುಂದಿನ ಸಾಲಿನಲ್ಲಿ ಆಸೀನರಾಗಿ, ಪರೇಡ್ ವೀಕ್ಷಿಸಲಿದ್ದಾರೆ!
ಹೌದು.. ಇದು. ನಿಜ ಈಗ ಹೊರಬಿದ್ದಿರುವ ಮಾಹಿತಿಗಳು ಪ್ರಕಾರ, ಸಾಮಾನ್ಯರನ್ನು ಫ್ರಂಟ್‌ಲೈನ್‌ನಲ್ಲಿ ಕೂಡಿಸುವ ಮೂಲಕ ನಿಜವಾಗಿಯೂ ಗಣರಾಜ್ಯ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರವು ಈ ವರ್ಷದ ಗಣರಾಜ್ಯೋತ್ಸವನ್ನು ಸಾಮಾನ್ಯ ಜನರ ಸಹಭಾಗಿತ್ವ ಪರಿಕಲ್ಪನೆಯಡಿಯಲ್ಲಿ ರೂಪಿಸಿದೆ. ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಿಗೆ ಇದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
ಹೊಸ ಸೆಂಟ್ರಲ್ ವಿಸ್ತಾದಲ್ಲಿ ಮೊದಲ ರಿಪಬ್ಲಿಕ್ ಡೇ!
ಪ್ರಸಕ್ತ ಸಾಲಿನ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇಷ್ಟು ಮಾತ್ರವಲ್ಲದೇ, ಇದೇ ಮೊದಲ ಬಾರಿಗೆ ಈಜಿಪ್ಟ್‌ನ 120 ಸದಸ್ಯರ ಕವಾಯತು ತಂಡವು ಪರೇಡ್‌ನಲ್ಲಿ ಭಾಗವಹಿಸುತ್ತಿದೆ!
ಪುನರ್ ಅಭಿವೃದ್ಧಿಪಡಿಸಲಾಗಿರುವ ಸೆಂಟ್ರಲ್ ವಿಸ್ತಾದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಡೆಸಲಾಗುತ್ತಿದೆ. ಈ ಮೊದಲು ಪರೇಡ್ ನಡೆಯುವ ಮಾರ್ಗವನ್ನು ರಾಜಪಥ ಎಂದು ಕರೆಯಲಾಗುತ್ತಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೆಂಟ್ರಲ್ ವಿಸ್ತಾಗೆ ಚಾಲನೆ ನೀಡಿ, ರಾಜಪಥವನ್ನು ಕರ್ತವ್ಯ ಪಥ ಎಂದು ಮರು ನಾಮಕಾರಣ ಮಾಡಲಾಯಿತು. ಜತೆಗೆ, ಪರೇಡ್ ವೀಕ್ಷಿಸಲು ಇದ್ದ 45 ಸಾವಿರ ಆಸನಗಳ ಸಂಖ್ಯೆಯನ್ನು 32 ಸಾವಿರಕ್ಕೆ ಇಳಿಸಲಾಗಿದೆ. ಈ ಪೈಕಿ ಶೇ.10ರಷ್ಟು ಸೀಟುಗಳನ್ನು ಬೀಟಿಂಗ್ ರಿಟ್ರೇಟ್‌ಗೆ ಮೀಸಲಾಗಿರತ್ತದೆ.
ನಾನಾ ಪ್ರದರ್ಶನ
ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬುಡಕಟ್ಟು ವ್ಯವಹಾರಗಳು ಮತ್ತು ರಕ್ಷಣಾ ಸಚಿವಾಲಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕೆಂಪು ಕೋಟೆಯಲ್ಲಿ ಭಾರತ್ ಪರ್ವ್ ಸಮಯದಲ್ಲಿ ವಿವಿಧ ರಾಜ್ಯಗಳ ಕಲಾ ಪ್ರಕಾರಗಳು ಮತ್ತು ಆಹಾರ ಪದಾರ್ಥಗಳ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂಡೆ, ಫ್ಲೈಪಾಸ್ಟ್‌ನಲ್ಲಿ 18 ಹೆಲಿಕಾಪ್ಟರ್‌ಗಳು, 8 ಟ್ರಾನ್ಸ್‌ಪೋರ್ಟರ್ ಏರ್‌ಕ್ರಾಫ್ಟ್‌ಗಳು ಮತ್ತು 23 ಫೈಟರ್ ಜೆಟ್ಸ್ ಇರಲಿವೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾನ್ಯರ ಕೇಂದ್ರೀತ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಕಳೆದ ಬಾರಿ ಘೋಷಿಸಲಾದ ಪದ್ಮ ಪ್ರಶಸ್ತಿಗಳ ವಿಷಯದಲ್ಲಿ ಸಾಮಾನ್ಯರಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ತೀರಾ ಪರಿಚಿತರಲ್ಲ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಲಾಗಿತ್ತು. ಈಗ ಗಣರಾಜ್ಯೋತ್ಸವದ ಪರೇಡ್ ವೇಳೆ, ಮುಂದಿನ ಸಾಲಿನಲ್ಲಿ ಸಾಮಾನ್ಯರಿಗೆ ಅವಕಾಶ ಕಲ್ಪಿಸುವ ಮೂಲಕ ಕಾಮನ್ ಮ್ಯಾನ್ ಫಸ್ಟ್ ನೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗುತ್ತಿದೆ.
ಇದನ್ನೂ ಓದಿ | Republic Day Tableau 2023 | ಗಣರಾಜ್ಯೋತ್ಸವಕ್ಕೆ ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆ ಹೇಗೆ, ಮಾನದಂಡಗಳೇನು?