Site icon Vistara News

Delhi Airport: ಹಾರುತ್ತಿದ್ದ ವಿಮಾನದಲ್ಲಿ ಅಗ್ನಿ ಅವಘಡ; ದೆಹಲಿ ಏರ್‌ಪೋರ್ಟ್‌ನಲ್ಲಿ ಎಮರ್ಜನ್ಸಿ ಘೋಷಣೆ!

Delhi Airport

Full emergency declared at Delhi's IGI airport

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ (Air India) ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್‌ ಇಂಡಿಯಾದ 807 ವಿಮಾನವು ಶುಕ್ರವಾರ (ಮೇ 17) ಸಂಜೆ 5.52ರ ಸುಮಾರಿಗೆ ಹಾರಾಟ ಆರಂಭಿಸಿದೆ. ಇದಾದ ಕೂಡಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 175 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಎಲ್ಲರೂ ಆತಂಕ್ಕೀಡಾಗಿದ್ದರು. ಆದಾಗ್ಯೂ, 6.38ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಕೂಡಲೇ ವಿಮಾನವನ್ನು ಲ್ಯಾಂಡ್‌ ಮಾಡಿದ ಕಾರಣ ಯಾರಿಗೂ ತೊಂದರೆಯಾಗಿಲ್ಲ ಎನ್ನಲಾಗಿದೆ.

“ಏರ್‌ ಇಂಡಿಯಾ ವಿಮಾನದ ಎ.ಸಿ ಯೂನಿಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು 6.15ರ ಸುಮಾರಿಗೆ ಕರೆ ಬಂತು. ಕೂಡಲೇ ಮೂರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದವು. ವಿಮಾನವನ್ನು ಲ್ಯಾಂಡ್‌ ಮಾಡುತ್ತಲೇ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಲ್ಯಾಂಡ್‌ ಆಗುತ್ತಲೇ ಕೆಲ ಹೊತ್ತಿನಲ್ಲಿಯೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಅದೃಷ್ಟವಶಾತ್‌, ಯಾರಿಗೂ ತೊಂದರೆಯಾಗಿಲ್ಲ” ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರವಷ್ಟೇ (ಮೇ 16) ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದಿತ್ತು. ದೆಹಲಿಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಅಧಿಕೃತ ಮಾಹಿತಿ ಪ್ರಕಾರ ಬೆಳಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿದೆ ಎನ್ನಲಾಗಿದೆ. ಇದಾದ ಬಳಿಕ ಪರಿಸ್ಥಿತಿ ತಿಳಿಯಾಗಿತ್ತು.

ಇದನ್ನೂ ಓದಿ: Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

Exit mobile version