Site icon Vistara News

Ram Mandir: ರಾಮಮಂದಿರ ಭದ್ರತೆಗೆ ಕೃತಕ ಬುದ್ಧಿಮತ್ತೆ ಬಲ; ಹೀಗಿದೆ ಹೈ ಸೆಕ್ಯುರಿಟಿ

Ram Mandir

Future-ready AI surveillance likely to guard Ram Mandir in Ayodhya

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇಶಾದ್ಯಂತ ಸಾವಿರಾರು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇನ್ನು ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial Intelligence) ಬಳಸಲು ತೀರ್ಮಾನಿಸಲಾಗಿದೆ.

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Sadguru and Artificial intelligence1

ಕೃತಕ ಬುದ್ಧಿಮತ್ತೆಯ ಬಳಕೆ ಹೇಗೆ?

“ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಿಗಾ ಇರಿಸಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಮುಂದಿನ ನಡೆ ಅನುಸರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಯಾವೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನ?

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಮೋದಿಗೆ ರಾಮ ಪೂಜೆ ಮಾಡುವ ಹಕ್ಕಿದೆಯೇ ಎಂದ ಸುಬ್ರಮಣಿಯನ್ ಸ್ವಾಮಿಗೆ ಜಾಡಿಸಿದ ನೆಟ್ಟಿಗರು!

ದಕ್ಷಿಣ ಭಾರತದ ಚಿತ್ರರಂಗದ ಗಣ್ಯರಾದ ರಜನಿಕಾಂತ್‌, ಚಿರಂಜೀವಿ, ಮೋಹನ್‌ಲಾಲ್‌, ಧನುಶ್‌, ಪ್ರಭಾಸ್ ಅವರಿಗೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ ಸುಮಾರು 4 ಸಾವಿರ ಸಂತರು ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version