ಶ್ರೀನಗರ: ಕಣಿವೆ ರಾಜ್ಯದಲ್ಲಿ ಜಿ20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ನಡೆಯುತ್ತಿದ್ದು, ಜಗತ್ತಿನ ವಿವಿಧೆಡೆಯಿಂದ ಆಗಮಿಸಿರುವ ಗಣ್ಯರು, ಪ್ರತಿನಿಧಿಗಳು ಜಮ್ಮು ಮತ್ತು ಕಾಶ್ಮೀರ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಶ್ರೀನಗರದ (Srinagar) ದಾಲ್ ಸರೋವರದಲ್ಲಿ (Dal Lake) ಶಿಕಾರಾ ಬೋಟ್ (shikara boat) ಸವಾರಿ ಎಂಜಾಯ್ ಮಾಡುತ್ತಿದ್ದಾರೆ(G20 Meeting).
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರುಚಿಕರವಾದ ವಜ್ವಾನ್ ಭೋಜನದ ನಂತರ ದಾಲ್ ಸರೋವರದಲ್ಲಿ ರಮಣೀಯವಾದ ಶಿಕಾರಾ ಸವಾರಿಯೊಂದಿಗೆ ದಿನವನ್ನು ಕೊನೆಗೊಳಿಸಲಾಯಿತು! ಧನ್ಯವಾದಗಳು ಎಂದು ಸಿಂಗಾಪುರ ಇನ್ ಇಂಡಿಯಾ ಟ್ವೀಟ್ ಮಾಡಿದೆ. ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಅದರ ಭಾಗವಾಗಿ ಶ್ರೀನಗರದಲ್ಲಿ ಮೂರನೇ ಜಿ 20 ಟೂರಿಸಮ್ ವರ್ಕಿಂಗ್ ಗ್ರೂಪ್(TWG) ಸಭೆಯನ್ನು ಆಯೋಜಿಸಲಾಗಿದೆ. ಒಟ್ಟು ಮೂರು ದಿನಗಳ ಕಾಲ ಈ ಸಭೆ ಶ್ರೀನಗರದಲ್ಲಿ ನಡೆಯಲಿದೆ.
ಈ ಸಭೆಯ ಮೊದಲನೇ ದಿನವೇ ಶ್ರೀನಗರವು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ಸೆಳೆದಿದೆ. ಕಾಶ್ಮೀರ ಕಣಿವೆಯಲ್ಲಿನ ಸ್ಥಿರತೆಯನ್ನು ಮರು ಸ್ಥಾಪಿಸುವಲ್ಲಿ ಮತ್ತು ಸಹಜ ಸ್ಥಿತಿಯನ್ನು ತರುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಮಾಧ್ಯಮಗಳು ಪ್ರಮುಖವಾಗಿ ಗುರುತಿಸುತ್ತಿವೆ.
ಶ್ರೀನಗರದಲ್ಲಿ ಸೋಮವಾರ ಜಿ20 ಸಭೆ ಆರಂಭವಾಯಿತು. ಶೇಖ್ ಉಲ್ ಅಲಂ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಆಗಮಿಸಿದ ವಿದೇಶಿ ಪ್ರತಿನಿಧಿಗಳನ್ನು ಭಾರತದ ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಬೆಳಗಿದ ದೀಪದ ಕಂಬಗಳ ಸಾಲುಗಳು ಮತ್ತು ಜಿ20 ಲೋಗೋವನ್ನು ಒಳಗೊಂಡಿರುವ ಜಾಹೀರಾತು ಫಲಕಗಳಿಂದ ಅವರನ್ನು ಸ್ವಾಗತಿಸಲಾಯಿತು ಎಂದು Nikkei Asia ವರದಿ ಮಾಡಿದೆ. 370ನೇ ವಿಧಿ ರದ್ದು ಮಾಡಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಭಾರತ ಆಯೋಜಿಸುತ್ತಿರುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.
ಇದನ್ನೂ ಓದಿ: G20 Meeting: ಜಿ20 ಸಭೆಯಲ್ಲೂ ನಾಟು ನಾಟು ಹವಾ; ರಾಮ್‌ಚರಣ್ ಜತೆ ದಕ್ಷಿಣ ಕೊರಿಯಾ ರಾಯಭಾರಿ ಡಾನ್ಸ್
ದಾಲ್ ಸರೋವರದ ಕನ್ವೆನ್ಶನ್ ಸೆಂಟರ್‌ನಲ್ಲಿ ಜಿ20 ಪ್ರತಿನಿಧಿಗಳು ಹಸಿರು ಪ್ರವಾಸೋದ್ಯಮ, ಡೆಸ್ಟಿನೇಷನ್ ಮ್ಯಾನೇಜ್ಮೆಂಟ್, ಪರಿಸರ ಪ್ರವಾಸೋದ್ಯಮ ಮತ್ತು ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಚಲನಚಿತ್ರಗಳ ಬಳಕೆ ಕುರಿತು ಚರ್ಚೆಗಳನ್ನು ನಡೆಸಲಿದರು. ಮಂಗಳವಾರ 2ನೇ ದಿನದ ಕಾರ್ಯಕ್ರಮಗಳು ಈಗ ನಡೆಯುತ್ತಿವೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.