ಹೊಸದಿಲ್ಲಿ: ಈ ವಾರ ದಿಲ್ಲಿಯಲ್ಲಿ ಜಿ20 ಶೃಂಗಸಭೆ (G20 Summit) ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಆನ್‌ಲೈನ್ ಆರ್ಡರ್‌ಗಳ ಡೆಲಿವರಿ ಮತ್ತಿತರ ಹಲವಾರು ಸೇವೆಗಳನ್ನು ಮೂರು ದಿನಗಳವರೆಗೆ ನಿಷೇಧಿಸಲಾಗಿದೆ.
“ಎಲ್ಲಾ ಕ್ಲೌಡ್ ಕಿಚನ್‌ಗಳು, ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆಗಳು, ಆಹಾರ ವಿತರಣೆ ಮತ್ತು ವಾಣಿಜ್ಯ ವಿತರಣಾ ಸೇವೆಗಳನ್ನು ಸೆಪ್ಟೆಂಬರ್ 8ರಿಂದ 10ರವರೆಗೆ ನವದೆಹಲಿ ಜಿಲ್ಲೆಯಲ್ಲಿ ಮುಚ್ಚಲಾಗುವುದು” ಎಂದು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಸ್‌ಎಸ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) ವಲಯದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳ ಮೂಲಕ ವಿತರಿಸುವ ಆರ್ಡರ್‌ಗಳನ್ನು ಸಹ ನಿಷೇಧಿಸಲಾಗಿದೆ.
ಆದರೆ ಅಗತ್ಯ ವೈದ್ಯಕೀಯ ವಸ್ತುಗಳ ವಿತರಣೆ ಸೇರಿದಂತೆ ಕೆಲವು ಸೇವೆಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಲ್ಯಾಬ್ ವರದಿಗಳು ಮತ್ತು ಮಾದರಿ ಸಂಗ್ರಹಣೆಗೆ ಅನುಮತಿ ಇದೆ. ಮನೆಗೆಲಸ, ಊಟೋಪಚಾರ, ಕಸ ವಿಲೇವಾರಿ ಇತ್ಯಾದಿಗಳಲ್ಲಿ ತೊಡಗಿರುವ ಜಿಲ್ಲೆಯ ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಇತರ ಮುಖ್ಯ ಸಂಸ್ಥೆಗಳ ವಾಹನಗಳಿಗೆ ಪರಿಶೀಲನೆಯ ನಂತರ ಅನುಮತಿ ನೀಡಲಾಗುತ್ತದೆ.
ಜಿ20 ರಾಷ್ಟ್ರಗಳ ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10ರಂದು ನವೀಕೃತ ಪ್ರಗತಿ ಮೈದಾನದ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾದ ಭಾರತ್ ಮಂಟಪಂ ಅಂತರಾಷ್ಟ್ರೀಯ ಪ್ರದರ್ಶನ-ಸಮ್ಮೇಳನ ಕೇಂದ್ರದಲ್ಲಿ ನಡೆಯಲಿದೆ. US ಅಧ್ಯಕ್ಷ ಜೋ ಬೈಡೆನ್, UK ಪ್ರಧಾನಿ ರಿಷಿ ಸುನಕ್, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೇವ್ ಮುಂತಾದ ವಿಶ್ವ ನಾಯಕರು ದೆಹಲಿ G20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ; ಭಾರತವು G20 ಕೂಟದ ಮೊದಲ ದಕ್ಷಿಣ ಏಷ್ಯಾದ ಸಭೆಯ ಆತಿಥ್ಯ ವಹಿಸಿದೆ.
ಇದನ್ನೂ ಓದಿ: Khalistani Separatist: ದೆಹಲಿ ಜಿ20 ಸಭೆಗೆ ಅಡ್ಡಿಪಡಿಸಿ; ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನಿ ಉಗ್ರ ಕರೆ!