ಹೊಸದಿಲ್ಲಿ: ಸೆಪ್ಟೆಂಬರ್ 9-10ರಂದು G20 ಶೃಂಗಸಭೆ (G20 Summit) ನಡೆಯುತ್ತಿರುವ ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ 20 ಟನ್ ತೂಕದ 27 ಅಡಿ ಎತ್ತರದ ನಟರಾಜನ ಕಂಚಿನ ಪ್ರತಿಮೆಯನ್ನು ವೇದಿಕೆಯ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.
ಪ್ರಗತಿ ಮೈದಾನದ ಭಾರತ ವ್ಯಾಪಾರ ಪ್ರಚಾರ ಸಂಸ್ಥೆ (ITPO) ಸಂಕೀರ್ಣದಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಈ ಶಿಲ್ಪವನ್ನು ಸಾಂಪ್ರದಾಯಿಕ ಎರಕದ ವಿಧಾನಗಳು ಮತ್ತು ಎಂಟು ಲೋಹಗಳ ಮಿಶ್ರಣವಾದ “ಅಷ್ಟ ಧಾತು” ಬಳಸಿ ತಯಾರಿಸಲಾಗಿದೆ. ಇದರಲ್ಲಿ ತಾಮ್ರ 87%ರಷ್ಟು ಇದೆ. ನಟರಾಜ ಅಥವಾ ಭಗವಾನ್ ಶಿವನು “ತಾಂಡವ” ಎಂದು ಕರೆಯಲ್ಪಡುವ ತನ್ನ ನೃತ್ಯ ಭಂಗಿಯಲ್ಲಿರುವ ಮೂರ್ತಿಯಿದು. ಇದು ಶಿವನ ಸೃಷ್ಟಿ, ಸ್ಥಿತಿ ಮತ್ತು ಸಂಹಾರಕ ಪಾತ್ರಗಳನ್ನು ಒಂದೇ ಭಂಗಿಯಲ್ಲಿ ಸೆರೆಹಿಡಿಯುತ್ತದೆ.
“ತಮ್ಮ ಸಾಂಪ್ರದಾಯಿಕ ಪರಿಣತಿಗೆ ಹೆಸರುವಾಸಿಯಾಗಿರುವ ತಮಿಳುನಾಡಿನ ಕುಂಭಕೋಣಂನ ಸ್ವಾಮಿಮಲೈನ ಕುಶಲಕರ್ಮಿಗಳು ಇದನ್ನು ಎರಕಹೊಯ್ದ ತಯಾರಿಸಿದ್ದಾರೆ. ಶಿಲ್ಪಶಾಸ್ತ್ರದಲ್ಲಿ ಸೂಚಿಸಲಾದ ಪ್ರಾಚೀನ ನಿಯಮಗಳು ಮತ್ತು ಅಳತೆಗಳಿಗೆ ಬದ್ಧರಾಗಿದ್ದಾರೆ. ಕ್ರಿ.ಶ. 9ನೇ ಶತಮಾನದ ಚೋಳರ ಕಾಲದಿಂದಲೂ ನಟರಾಜ ಶಿಲ್ಪಗಳ ರಚನೆಗೆ ಇವರು ಮಾರ್ಗದರ್ಶನ ನೀಡಿದ್ದಾರೆʼʼ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಕೀರ್ಣವಾದ ಈ ಪ್ರತಿಮೆ ತಯಾರಿಕೆಯ ಪ್ರಕ್ರಿಯೆಯು ಹಲವಾರು ಹಂತಗಳನ್ನು ಒಳಗೊಂಡಿದೆ. ಮೊದಲು ಮಣ್ಣಿನ ಆಧಾರ ಆಕೃತಿಯನ್ನು ರಚಿಸುವುದು, ನಂತರ ಅದರ ಮೇಲೆ ಮೇಣದ ಪದರದ ರಚನೆ, ನಂತರ ಲೋಹದ ಎರಕ ಹಾಗೂ ಫಿನಿಶಿಂಗ್ ಇತ್ಯಾದಿ. ನಟರಾಜ ಶಿಲ್ಪಕ್ಕೆ ಜೀವ ತುಂಬಲು ಸರಿಸುಮಾರು 3,25,000 ಮಾನವ-ಗಂಟೆಗಳನ್ನು ವಿನಿಯೋಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಶಿವ-ನಟರಾಜ ಎರಡು ಅದೃಶ್ಯ ಅಂತರ್ ಸಂಬಂಧಿತ ತ್ರಿಕೋನಗಳನ್ನು ಸಹ ಒಳಗೊಂಡಿದೆ. ಇದು ಶಿವ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದು ವಸ್ತು ಮತ್ತು ಶಕ್ತಿಯ ಮಿಲನವನ್ನು ಸಂಕೇತಿಸುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: G20 Summit 2023 : ಜಿ20 ಶೃಂಗ ಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬರುವುದೂ ಅನುಮಾನ