ಶ್ರೀನಗರ: ಕಲ್ಲು ತೂರಾಟ, ಉಗ್ರರ ದಾಳಿ, ಪಾಕಿಸ್ತಾನದ ಪರ ಘೋಷಣೆಗಳೇ ಕೇಳಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಬದಲಾವಣೆಯ ಯುಗ ಆರಂಭವಾಗಿದೆ. ಅದರಲ್ಲೂ, ಸೋಮವಾರದಿಂದ ಎರಡು ದಿನಗಳವರೆಗೆ ಜಿ-20 ಶೃಂಗಸಭೆ (G20 Meeting) ನಡೆಯಲಿದ್ದು, 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸಭೆಗೆ ಶ್ರೀನಗರ ಸಾಕ್ಷಿಯಾಗಲಿದೆ.
ಜಿ 20 ರಾಷ್ಟ್ರಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುವ ಮೂರನೇ ಸಭೆಯು ಮೇ 24ರವರೆಗೆ ನಡೆಯಲಿದೆ. ಸದಸ್ಯ ರಾಷ್ಟ್ರಗಳ 60 ಸದಸ್ಯರು ಈ ಐತಿಹಾಸಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರವಾಸೋದ್ಯಮಕ್ಕೆ ಭವಿಷ್ಯದ ದಿಕ್ಸೂಚಿ ಮತ್ತು ಜಿ20 ಪ್ರವಾಸೋದ್ಯಮ ಸಚಿವರ ಘೋಷಣೆ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳಾಗಲಿವೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಸಭೆಗಳು ನಡೆಯಲಿವೆ. ಈಗಾಗಲೇ ಗುಜರಾತ್‌ನ ಕಛ್ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಎರಡು ಸಭೆ ನಡೆದಿದ್ದು, ಕೊನೆಯ ಸಭೆಯು ಗೋವಾದಲ್ಲಿ ಜೂನ್ ತಿಂಗಳಲ್ಲಿ ನಡೆಯಲಿದೆ.
ಹೇಗಿದೆ ಭದ್ರತೆ?
ಉಗ್ರರ ಪ್ರಯೋಗಶಾಲೆಯೇ ಆಗಿದ್ದ ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶ್ರೀನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸಭೆ ನಡೆಯುವ ಸ್ಥಳದ ಸುತ್ತ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಶ್ರೀನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್‌ಗಳ ಕಣ್ಗಾವಲು ಇರಿಸಲಾಗಿದೆ. ಆ ಮೂಲಕ ಸಭೆಯ ಯಶಸ್ಸಿಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಜಿ20 ಸಭೆ ತಪ್ಪಿಸಲು ಪಾಕಿಸ್ತಾನದ ಸಂಚು; ದೊಡ್ಡ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ
ಅದರಲ್ಲೂ, ಜಮ್ಮು-ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಆಗಾಗ ಮೂಗು ತೂರಿಸುತ್ತದೆ. ಉಗ್ರರನ್ನು ಛೂ ಬಿಟ್ಟು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ. ಇನ್ನು, ಚೀನಾ ಕೂಡ ಕಳೆದ ಬಾರಿ ಅರುಣಾಚಲ ಪ್ರದೇಶದಲ್ಲಿ ನಡೆದ ಸಭೆಗೆ ಹಾಜರಾಗಿರಲಿಲ್ಲ. ಈಗ, ವಿವಾದಿತ ಪ್ರದೇಶದಲ್ಲಿ ಸಭೆ ನಡೆಯುತ್ತಿದೆ ಎಂದು ಹೇಳಿ, ಸಭೆ ಬಹಿಷ್ಕರಿಸಿದೆ. ಹಾಗಾಗಿ, ವೈರಿ ರಾಷ್ಟ್ರಗಳಿಗೆ ತಿರುಗೇಟು ನೀಡುವ ದೃಷ್ಟಿಯಿಂದಲೂ ಸಭೆಯು ಪ್ರತಿಷ್ಠೆ ಹಾಗೂ ಮಹತ್ವದ್ದಾಗಿದೆ.