Site icon Vistara News

G7 Summit | ನರೇಂದ್ರ ಮೋದಿ ವಿವಿಧ ದೇಶಗಳ ನಾಯಕರಿಗೆ ಕೊಟ್ಟ ಉಡುಗೊರೆಗಳೇನು?

G7 Summit

ನವ ದೆಹಲಿ: ಜಿ7 ಶೃಂಗಸಭೆಯಲ್ಲಿ (G7 Summit) ಭಾಗಿಯಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ವಿವಿಧ ದೇಶಗಳ ನಾಯಕರಿಗೆ ಬಗೆಬಗೆಯ ಉಡುಗೊರೆಗಳನ್ನು ನೀಡಿ ಗೌರವಿಸಿದ್ದಾರೆ. ಭಾರತದ ಶ್ರೀಮಂತ ಕಲಾಪ್ರಕಾರಗಳನ್ನು ಪ್ರತಿನಿಧಿಸುವಂತಹ ವಿವಿಧ ಗಿಫ್ಟ್‌ಗಳನ್ನು ನೀಡುವ ಮೂಲಕ ದೇಶದ ಕಲಾಶ್ರೀಮಂತಿಕೆಯನ್ನು ವಿಶ್ವಕ್ಕೆ ಪಸರಿಸಿದ್ದಾರೆ. ಈ ಮೂಲಕ ಭಾರತ ಹಾಗೂ ವಿವಿಧ ದೇಶಗಳ ನಡುವಿನ ಆಪ್ತತೆಯನ್ನು ಇನ್ನೂ ಹೆಚ್ಚಿಸಿದ್ದಾರೆ. ಅಂತೆಯೇ ಪ್ರಧಾನಿ ಮೋದಿಯವರು ನೀಡಿದ ಈ ಉಡುಗೊರೆಗಳು ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಸಂಕೇತಗಳಾಗಿವೆ.

ಜರ್ಮನಿಯ ಚಾನ್ಸೆಲರ್‌ ಒಲಾಫ್‌ ಶಾಲ್ಸ್‌ಗೆ ತಾಮ್ರದ ಪಾತ್ರೆ

ಜರ್ಮನಿಯ ಚಾನ್ಸೆಲರ್‌ ಒಲಾಫ್‌ ಶಾಲ್ಸ್‌ ಅವರಿಗೆ ವಿಶಿಷ್ಟ ತಾಮ್ರದ ಪಾತ್ರೆಯನ್ನು ಮೋದಿಯವರು ಉಡುಗೊರೆಯಾಗಿ ಕೊಟ್ಟಿದ್ದಾರೆ. ʼತಾಮ್ರದ ನಗರಿʼ ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ತಯಾರಿಸಿದ ಪಾತ್ರೆ ಇದು. ಲೋಹದ ‘ಮರೋಡಿ’ ಕೆತ್ತನೆ ಇರುವ ಈ ತಾಮ್ರದ ಮಡಿಕೆ ಅತ್ಯಂತ ವಿಶೇಷವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಗುಲಾಬಿ ಮೀನಕಾರಿ

ಉತ್ತರ ಪ್ರದೇಶದ ವಾರಾಣಸಿಯ ವಿಶೇಷ ಕಲಾಪ್ರಕಾರವಾದ ʼಗುಲಾಬಿ ಮೀನಕಾರಿʼ ಎಂಬ ಕಫ್ಲಿಂಕನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಮೋದಿಯರು ಹಸ್ತಾಂತರಿಸಿದರು. ಇದಕ್ಕೆ ಹೊಂದುವಂತಹ ಒಂದು ಪದಕವನ್ನೂ ಬೈಡೆನ್‌ ಪತ್ನಿ ಜಿಲ್‌ ಬೈಡೆನ್‌ ಅವರಿಗೆ ಪ್ರಧಾನಿ ಮೋದಿಯವರು ನೀಡಿದರು.

ಯು.ಕೆ ಪ್ರಧಾನಿ ಬೊರಿಸ್‌ ಜಾನ್ಸನ್‌ಗೆ ಪ್ಲಾಟಿನಂ ಪೇಂಟೆಡ್‌ ಟೀ ಸೆಟ್

ಯು.ಕೆ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರಿಗೆ ಪ್ರಧಾನಿ ಮೋದಿಯವರು ಟೀ ಸೆಟ್‌ ಉಡುಗೊರೆಯಾಗಿ ನೀಡಿದರು. ಈ ಟೀ ಸೆಟ್‌ಗೆ ಪ್ಲಾಟಿನಂನಿಂದ ಪೇಂಟ್‌ ಮಾಡಲಾಗಿದೆ. ಅವುಗಳ ಮೇಲೆ ಕೈಗಳಿಂದ ಬಿಡಿಸಿದ ಚಿತ್ರಗಳಿವೆ. ಉತ್ತರ ಪ್ರದೇಶದ ಬುಲಂದ್ ಶಹರ್‌ನ ಕಲಾಕಾರರು ಈ ಸುಂದರ ಟೀ ಸೆಟ್‌ಗೆ ಪ್ಲಾಟಿನಂ ಪೇಂಟ್‌ ಮಾಡಿದ್ದಾರೆ. ಈ ವರ್ಷ ಇಂಗ್ಲೆಂಡ್‌ನ ರಾಣಿ ಪ್ಲಾಟಿನಂ ಜುಬಿಲಿ ಆಚರಿಸಲಿದ್ದು, ಅದರ ಗೌರವಾರ್ಥವಾಗಿ ಈ ಉಡುಗೊರೆ ನೀಡಲಾಗಿದೆ.

‌ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯಲ್‌ ಮ್ಯಾಕ್ರನ್‌ಗೆ ಜರ್ದೋಜ ಬಾಕ್ಸ್‌

ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯಲ್‌ ಮಾಕ್ರನ್‌ ಅವರಿಗೆ ಜರ್ದೋಜ ಬಾಕ್ಸ್‌ನಲ್ಲಿ ಆಕರ್ಷಕ ಬಾಟಲಿಗಳನ್ನು ನೀಡಿದ್ದಾರೆ. ಈ ಪೆಟ್ಟಿಗೆಗೆ ರೇಶ್ಮೆ ಹಾಗೂ ಸ್ಯಾಟಿನ್‌ ಬಟ್ಟೆಯಿಂದ ಅಲಂಕಾರಗೊಳಿಸಿ, ಫ್ರಾನ್ಸ್‌ ಧ್ವಜದ ಬಣ್ಣಗಳಿಂದ ವಿನ್ಯಾಸ ಮಾಡಲಾಗಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ಕಲಾಕೃತಿಯನ್ನು ತಯಾರಿಸಲಾಗಿದೆ. ಈ ಬಾಕ್ಸ್‌ನಲ್ಲಿ ಅತ್ತರ್‌ ಮಿಟ್ಟಿ, ಮಲ್ಲಿಗೆ ತೈಲ, ಗರಂ ಮಸಾಲ ಸೇರಿದಂತೆ ವಿಭಿನ್ನ ಪದಾರ್ಥಗಳನ್ನು ಇರಿಸಲಾಗಿದೆ.

ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರುಡೊಗೆ ಕೈಮಗ್ಗದ ರೇಷ್ಮೆ ಚಾದರ

ಪ್ರಧಾನಿ ಮೋದಿಯವರು ಕೈಮಗ್ಗದ ರೇಷ್ಮೆ ಕಾರ್ಪೆಟ್ ಅನ್ನು ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರುಡೊ ಅವರಿಗೆ ಉಡುಗೊರೆಯಾಗಿ ನೀಡಿದರು. ಕಾಶ್ಮೀರದ ರೇಷ್ಮೆಯನ್ನು ಉಪಯೋಗಿಸಿ ಶ್ರೀನಗರದಲ್ಲಿ ತಯಾರಾದ ವಿಶೇಷ ಚಾದರ ಇದಾಗಿದೆ.

‌ಜಪಾನ್‌ ಪ್ರಧಾನಿ ಫುಮಿನೊ ಕಿಶಿದಗೆ ಆಕರ್ಷಕ ಕಪ್ಪು ಮಡಕೆ

ಜಪಾನ್‌ ಪ್ರಧಾನಿ ಫುಮಿನೊ ಕಿಶಿದ ಅವರಿಗೆ ಮೋದಿಯವರು ನಿಜಾಮಾಬಾದ್‌ನಲ್ಲಿ ತಯಾರಿಸಲಾದ ಆಕರ್ಷಕ ಕಪ್ಪು ಬಣ್ಣದ, ರೇಖಾಚಿತ್ರಗಳನ್ನು ಹೊಂದಿದ ಮಡಕೆಯನ್ನು ನೀಡಿದ್ದಾರೆ.

ಇಟಲಿ ಪ್ರಧಾನಿ ಮಾರಿಯೊ ಡ್ರಾಘಿ- ಮಾರ್ಬಲ್‌ ಇನ್‌ಲೆ ಟೇಬಲ್‌ ಟಾಪ್

ಇಟಲಿ ಪ್ರಧಾನಿ ಮಾರಿಯೊ ಡ್ರಾಘಿ ಅವರಿಗೆ ಟೇಬಲ್‌ ಮೇಲೆ ಇಡುವಂತಹ ಶಿಲೆಯ ಕಲಾಕೃತಿಯನ್ನು ಪ್ರಧಾನಿ ಮೋದಿಯವರು ಉಡುಗೊರೆಯಾಗಿ ನೀಡಿದರು. ಈ ಅಮೃತಶಿಲೆಯ ಕಲಾಕೃತಿ ಆಗ್ರಾ ಮೂಲದ್ದಾಗಿದೆ.

ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೊಸ ಅವರಿಗೆ ಡೋಕ್ರಾ ಕಲೆ

ರಾಮಾಯಣವನ್ನು ಪ್ರತಿನಿಧಿಸುವ ವಿಶೇಷ ಕಲಾಕೃತಿಯಾದ ಡೋಕ್ರಾ ಆರ್ಟ್‌ಅನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೊಸ ಅವರಿಗೆ ನೀಡಲಾಯಿತು. ಡೋಕ್ರಾ ಆರ್ಟ್‌ ಎಂಬುದು ಛತ್ತಿಸ್‌ಗಢದ ಪ್ರತಿಮೆ ತಯಾರಿಸುವ ವಿಶೇಷ ಕಲಾಪ್ರಕಾರ. ಇದು ಮೇಣದಿಂದ ಪ್ರತಿಮೆ ಮಾಡುವ ಕಲೆಯಾಗಿದ್ದು, ನಿಧಾನವಾಗಿ ನಶಿಸಿ ಹೋಗುತ್ತಿದೆ. ಈ ಪದ್ಧತಿಯಿಂದ ಮಾಡಿದ ಪ್ರತಿಮೆಯನ್ನು ಮೋದಿಯವರು ಉಡುಗೊರೆಯಾಗಿ ನೀಡಿದ್ದು ಗಮನಾರ್ಹ.

ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೊ ಫೆರ್ನಾಂಡೆಜ್‌ಗೆ ಡೋಕ್ರಾ ಕಲೆಯ ನಂದಿ

ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೊ ಫೆರ್ನಾಂಡೆಜ್‌ ಅವರಿಗೆ ಮೋದಿಯವರು ಡೋಕ್ರಾ ಆರ್ಟ್‌ ಪ್ರಕಾರದ ನಂದಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು.

ಸೆನೆಗಲ್‌ ಅಧ್ಯಕ್ಷ ಮಾಕಿ ಸಾಲ್‌ಗೆ ಮೂಂಜ್‌ ಬಾಸ್ಕೆಟ್ ಹಾಗೂ‌ ಕಾಟನ್‌ ಡುರ‍್ರಿ

ಪ್ರಧಾನಿ ಮೋದಿಯವರು ಸೆನೆಗಲ್‌ ಅಧ್ಯಕ್ಷ ಮಾಕಿ ಸಾಲ್‌ ಅವರಿಗೆ ವಿಶೇಷ ಬುಟ್ಟಿ ಹಾಗೂ ಕಾಟನ್‌ ಡುರ್ರಿಗಳನ್ನು ನೀಡಿದರು. ಈ ಬುಟ್ಟಿಗಳನ್ನು ಮೂಂಜ್‌ ಎಂದು ಹೇಳಲಾಗುತ್ತದೆ. ಇದನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಿಳೆಯೊಬ್ಬರು ತಯಾರಿಸಿದ್ದಾರೆ.

ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊಗೆ ರಾಮ ದರ್ಬಾರ್‌ ಪ್ರತಿಮೆ

ಶ್ರೀರಾಮನ ದರ್ಬಾರ್‌ ಪ್ರತಿನಿಧಿಸುವ ಮೂರ್ತಿಯನ್ನು ಪ್ರಧಾನಿ ಮೋದಿಯವರು ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರಿಗೆ ನೀಡಿದರು. ರಾಮ, ಲಕ್ಷಣ, ಸೀತೆ, ಹನುಮಂತ ಹಾಗೂ ಜಟಾಯು ಇರುವ ಈ ಮೂರ್ತಿಯನ್ನು ವಾರಾಣಸಿಯಲ್ಲಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: G7 Summit | ಪ್ರಧಾನಿ ಮೋದಿ ಹಾಗೂ ವಿಶ್ವದ ವಿವಿಧ ದೇಶಗಳ ನಾಯಕರ ಭೇಟಿಯ ಸುಂದರ ಚಿತ್ರಗಳು

Exit mobile version