ನವ ದೆಹಲಿ: ಭಾರತದ ಬಹುನಿರೀಕ್ಷೆಯ ಮಾನವ ಸಹಿತ ಗಗನಯಾನ (Gaganyaan) ಮಿಷನ್ 2024ರಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ, ಈ ಮಿಷನ್ ಇದೇ ವರ್ಷವೇ ಕೈಗೊಳ್ಳಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ಸಾಧ್ಯವಾಗಲಿಲ್ಲ. ಈಗ 2024ಕ್ಕೆ ನಿಗದಿ ಪಡಿಸಲಾಗಿದೆ.
ಗಗನಯಾನದಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳಿಗೆ ರಷ್ಯಾ ಮತ್ತು ಭಾರತದಲ್ಲಿ ತರಬೇತಿ ನೀಡಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಮಾನವಸಹಿತ ಈ ಗಗನಯಾನ ಮಿಷನ್‌ಗೆ ನಾಲ್ವರು ಫೈಟರ್ ಪೈಲಟ್‌ಗಳನ್ನು ಭಾರತೀಯ ವಾಯು ಪಡೆಯು ಗುರುತಿಸಿದೆ. ಹೀಗೆ ಗುರುತಿಸಲಾದ ಪೈಲಟ್‌ಗಳು ರಷ್ಯಾದಲ್ಲಿ ತಬೇತಿಯನ್ನು ಪಡೆದುಕೊಳ್ಳಲಿದ್ದಾರೆ.
ಎರಡು ಆರ್ಬಿಟಲ್ ಟೆಸ್ಟ್ ಫ್ಲೈಟ್ಸ್ ಪರೀಕ್ಷೆ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕನಿಷ್ಠ ಇಬ್ಬರು ಗಗನಯಾತ್ರಿಗಳನ್ನು ಅರ್ಥ್ ಆರ್ಬಿಟ್‌ಗೆ(ಭೂ ಕಕ್ಷೆಗೆ) 2024ರಲ್ಲಿ ಕಳುಹಿಸಲು ಮುಂದಾಗಿದೆ.