Site icon Vistara News

Gaganyaan: ಗಗನಯಾನ ಯಾತ್ರಿಗಳ ಹೆಸರು ರಿವೀಲ್‌ ಮಾಡಿದ ಮೋದಿ; ಇವರೇ ಸಾರಥಿಗಳು

ISRO Astronauts

ತಿರುವನಂತಪುರಂ: ಭಾರತದ ಮಹತ್ವಾಕಾಂಕ್ಷೆಯ, ಮೊದಲ ಮಾನವಸಹಿತ ಗಗನಯಾತ್ರೆಯಾದ ‘ಗಗನಯಾನ’ಕ್ಕೆ (Gaganyaan Mission) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾನವ ಸಹಿತ ಗಗನಯಾನ ಕೈಗೊಳ್ಳುವ ಗಗನಯಾತ್ರಿಗಳ ಹೆಸರುಗಳನ್ನು ಘೋಷಿಸಿದ್ದಾರೆ. ಇದರೊಂದಿಗೆ ಮುಂದಿನ ವರ್ಷ ಕೈಗೊಳ್ಳುವ ಇಸ್ರೋ ಮಿಷನ್‌ಗೆ ಗಗನಯಾತ್ರಿಗಳನ್ನು ಅಂತಿಮಗೊಳಿಸಿದಂತಾಗಿದೆ.

ಇವರೇ ನೋಡಿ ಗಗನಯಾತ್ರಿಗಳು

ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌, ಗ್ರೂಪ್‌ ಕ್ಯಾಪ್ಟನ್‌

ಅಜಿತ್‌ ಕೃಷ್ಣನ್‌, ಗ್ರೂಪ್‌ ಕ್ಯಾಪ್ಟನ್‌

ಅಂಗದ್‌ ಪ್ರತಾಪ್‌, ಗ್ರೂಪ್‌ ಕ್ಯಾಪ್ಟನ್‌

ಶುಭಾಂಶು ಶುಕ್ಲಾ, ವಿಂಗ್‌ ಕಮಾಂಡರ್‌

ನಾಲ್ವರೂ ಗಗನಯಾತ್ರಿಗಳಿಗೆ ವಿಂಗ್‌ಗಳನ್ನು ನೀಡಿದ ನರೇಂದ್ರ ಮೋದಿ ಅವರು, ಎಲ್ಲರೂ ಎದ್ದು ನಿಂತು ಗಗನಯಾತ್ರಿಗಳಿಗೆ ಗೌರವ ಸೂಚಿಸಿ ಎಂದು ಹೇಳಿದರು. ಆಗ ಎಲ್ಲರೂ ಎದ್ದು ನಿಂತು ಗಗನಯಾತ್ರಿಗಳಿಗೆ ಗೌರವ ಸೂಚಿಸಿದರು. ಇದಾದ ಬಳಿಕ ಮಾತನಾಡಿದ ಮೋದಿ, “ಭಾರತವು ಈಗ ಎಲ್ಲ ಕ್ಷೇತ್ರಗಳಲ್ಲಿ ಐತಿಹಾಸಿಕ ಸಾಧನೆ ಮಾಡುತ್ತಿದೆ. ಈಗ ಮಾನವಸಹಿತ ಗಗನಯಾನಕ್ಕೆ ಇಸ್ರೋ ಅಣಿಯಾಗುತ್ತಿದೆ. ಈಗ ಸಮಯವೂ ನಮ್ಮದು, ಕೌಂಟ್‌ಡೌನ್‌ ಕೂಡ ನಮ್ಮದಾಗಿದೆ ಹಾಗೂ ರಾಕೆಟ್‌ ಕೂಡ ನಮ್ಮದಾಗಿದೆ. ಇದು ನವ ಭಾರತದ ಉದಯದ ಸಂಕೇತ” ಎಂದು ತಿಳಿಸಿದರು.

ಕೇರಳ ಭೇಟಿಯಲ್ಲಿರುವ ನರೇಂದ್ರ ಮೋದಿ ಅವರು ತಿರುವನಂತಪುರಂನಲ್ಲಿರುವ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಮಿಷನ್‌ನ ಪ್ರಗತಿ ಕುರಿತು ಪರಿಶೀಲನೆ ನಡೆಸಿದರ. ಮಿಷನ್‌ ಕುರಿತು ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಅವರು ಗಗನಯಾನ ಕೈಗೊಳ್ಳಲಿರುವ ಗಗನಯಾತ್ರಿಗಳ ಹೆಸರುಗಳನ್ನು ಪ್ರಕಟಿಸಿದರು. ಇದೇ ವೇಳೆ ಅವರು ಬಾಹ್ಯಾಕಾಶ ಕ್ಷೇತ್ರಗಳಿಗೆ ಸಂಬಂಧಿಸಿದ 1,800 ಕೋಟಿ ರೂ. ವೆಚ್ಚದ ಯೋಜನೆಗಳಿಗೂ ಚಾಲನೆ ನೀಡಿದರು.

ಇದನ್ನೂ ಓದಿ: Vyommitra Robot: ಗಗನಯಾನಕ್ಕೂ ಮೊದಲು ನಭಕ್ಕೆ ನೆಗೆಯಲಿರುವ ‘ವ್ಯೋಮಮಿತ್ರ’; ಯಾರೀಕೆ?

ಕಳೆದ ವರ್ಷ ಇಸ್ರೋ ಕೈಗೊಂಡ ಚಂದ್ರಯಾನ 3 ಮಿಷನ್‌ ಯಶಸ್ವಿಯಾಗಿರುವುದು ಬಾಹ್ಯಾಕಾಶ ವಿಜ್ಞಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗ ಮಾನವಸಹಿತ ಗಗನಯಾನ ಕೈಗೊಳ್ಳುವ ಮೂಲಕ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಹಾಗೆ ನೋಡಿದರೆ, ಗಗನಯಾನ ಮಿಷನ್‌ ಕೆಲ ವರ್ಷಗಳ ಹಿಂದೆಯೇ ಕೈಗೊಳ್ಳಬೇಕಿತ್ತು. ಆದರೆ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಮಿಷನ್‌ ನನೆಗುದಿಗೆ ಬಿದ್ದಿತ್ತು. 2025ರಲ್ಲಿ ಗಗನಯಾನ ಮಿಷನ್‌ ಉಡಾವಣೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 3,040 ಕೋಟಿ ರೂ. ವ್ಯಯಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version