ಪಟನಾ: ದೇಶದ ರಕ್ಷಣೆಗಾಗಿ ಮಡಿದ ಯೋಧರಿಗೆ ದೇಶದಲ್ಲಿ ಹೆಚ್ಚಿನ ಗೌರವವಿದೆ. ದೇಶಕ್ಕಾಗಿ ಹೋರಾಡುತ್ತಲೇ ಯೋಧ ಹುತಾತ್ಮನಾದರೆ, ಆತನ ಕುಟುಂಬಕ್ಕೆ ಸರ್ಕಾರ ನೆರವು ನೀಡುತ್ತದೆ. ಜನರೂ ಯೋಧನ ಕುಟುಂಬಸ್ಥರ ಪರ ನಿಲ್ಲುತ್ತಾರೆ. ಆದರೆ, ಬಿಹಾರದಲ್ಲಿ ಮಾತ್ರ ಪೊಲೀಸರು ಹುತಾತ್ಮ ಯೋಧನ ತಂದೆಯ ಮೇಲೆ ಹಲ್ಲೆ (Soldier’s Father Thrashed) ನಡೆಸಿ, ಬಳಿಕ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಹುತಾತ್ಮ ಯೋಧನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ೨೦೨೦ರಲ್ಲಿ ಚೀನಾದ ಪಿಎಲ್‌ಎ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ೨೦ ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ಬಿಹಾರದ ವೈಶಾಲಿ ಜಿಲ್ಲೆಯ ಯೋಧರೂ ಒಬ್ಬರಾಗಿದ್ದಾರೆ. ಹುತಾತ್ಮನಾದ ಮಗನ ತಂದೆ ಜೈ ಕಿಶೋರ್ ಸಿಂಗ್ ಅವರು ವೈಶಾಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಿ, ಅದರಲ್ಲಿ ಪ್ರತಿಮೆಯೊಂದನ್ನು ಅಳವಡಿಸಿದ್ದಾರೆ. ಇದೇ ಸ್ಮಾರಕದ ಜಾಗದ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ಜೈ ಕಿಶೋರ್ ಸಿಂಗ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಜಾಗದಲ್ಲಿ ಸ್ಮಾರಕ ನಿರ್ಮಿಸಿದ ಕಾರಣಕ್ಕಾಗಿ ಪೊಲೀಸರು ಜೈ ಕಿಶೋರ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ, ಬಂಧಿಸಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. “ಡಿಎಸ್‌ಪಿಯವರು ಬಂದು ೧೫ ದಿನದಲ್ಲಿ ಪ್ರತಿಮೆ, ಸ್ಮಾರಕ ತೆರವುಗೊಳಿಸಬೇಕು ಎಂದಿದ್ದರು. ಆದರೆ, ಏಕಾಏಕಿ ಬಂದ ಪೊಲೀಸರು ಜೈ ಕಿಶೋರ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರನ್ನು ಬಂಧಿಸಿದ್ದಾರೆ” ಎಂದು ಜೈ ಕಿಶೋರ್ ಸಿಂಗ್ ಅವರ ಸಹೋದರ ಹೇಳಿದ್ದಾರೆ. ಸಿಂಗ್ ಸಹೋದರ ಕೂಡ ಯೋಧರಾಗಿದ್ದಾರೆ. ಹಲ್ಲೆಯ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಇದನ್ನೂ ಓದಿ: ನನ್ನ ತಾತನೂ ಹುತಾತ್ಮ ಯೋಧ, ನಾನ್ಯಾಕೆ ಸೇನೆಗೆ ಅವಮಾನಿಸಲಿ?; ‘ನಪುಂಸಕ ಪಡೆ ನಿರ್ಮಾಣ’ ಎಂದಿದ್ದ ಆರ್ಜೆಡಿ ನಾಯಕನ ಸಮರ್ಥನೆ