ಲಖನೌ: ಉತ್ತರ ಪ್ರದೇಶದಲ್ಲಿ ಇನ್ನೊಂದು ಎನ್ಕೌಂಟರ್ ಆಗಿದೆ. ಭಯಂಕರ ಗ್ಯಾಂಗ್ಸ್ಟರ್ ಎನ್ನಿಸಿಕೊಂಡಿದ್ದ ಅನಿಲ್ ದುಜಾನಾ(Anil Dujana)ನನ್ನು ಇಂದು ಮೀರತ್ನಲ್ಲಿ ಉತ್ತರ ಪ್ರದೇಶ ಸ್ಪೆಶಲ್ ಟಾಸ್ಕ್ ಫೋರ್ಸ್ (STF) ಕೊಂದು ಹಾಕಿದೆ. ಈತ ಮೂಲತಃ ಗೌತಮ ಬುದ್ಧ ನಗರ ಜಿಲ್ಲೆಯ ದುಜಾನಾ ಗ್ರಾಮದವನು. ಗ್ಯಾಂಗ್ಸ್ಟರ್ ಅನಿಲ್ ವಿರುದ್ಧ 18 ಕೊಲೆ ಕೇಸ್ಗಳು, ಸುಲಿಗೆ, ದರೋಡೆ, ಭೂ ಕಬಳಿಕೆ, ಒತ್ತುವರಿ ಸೇರಿ ಒಟ್ಟು 62 ಕ್ರಿಮಿನಲ್ ಕೇಸ್ಗಳು ಇದ್ದವು.
ಅನಿಲ್ ದುಜಾನಾ ಹಲವು ಕೇಸ್ಗಳಲ್ಲಿ ಬೇಕಾದವನಾಗಿದ್ದ. ಬುಲಾಂದ್ಶಹರ್ ಪೊಲೀಸರು ಆತನ ತಲೆಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಹಾಗೇ, ನೊಯ್ಡಾ ಪೊಲೀಸರು 50 ಸಾವರ ರೂ. ಬಹುಮಾನ ನಿಗದಿ ಪಡಿಸಿದ್ದರು. ಅದಾದ ಮೇಲೆ 2012ರಿಂದಲೂ ಆತ ಜೈಲಿನಲ್ಲಿಯೇ ಇದ್ದ. 2021ರಲ್ಲಿ ಜಾಮೀನು ಸಿಕ್ಕಿ ಹೊರಬಂದರೂ, 2022ರಲ್ಲಿ ಮತ್ತೆ ಅರೆಸ್ಟ್ ಆಗಿದ್ದ. ಕಳೆದ ಕೆಲವು ವಾರಗಳ ಹಿಂದಷ್ಟೇ ಜೈಲಿಂದ ಹೊರಬಂದಿದ್ದ. ಅವನು ಜೈಲಲ್ಲಿ ಇದ್ದುಕೊಂಡೇ ಹಲವು ಕ್ರಿಮಿನಲ್ ಕೆಲಸಗಳನ್ನು ನಡೆಸಿದ್ದಾನೆ ಎಂದೂ ಹೇಳಲಾಗಿದೆ.
ಜೈಲಿಂದ ಹೊರಬರುತ್ತಿದ್ದಂತೆ ಅವನು ತನ್ನ ಹಳೇ ಚಾಳಿ ಮುಂದುವರಿಸಿದ್ದ. ಅನಿಲ್ ಹತ್ಯೆ ಮಾಡಿದ ಕೇಸ್ವೊಂದರ ಪ್ರಮುಖ ಸಾಕ್ಷಿಗೆ ಬೆದರಿಕೆಯೊಡ್ಡಲು ಶುರು ಮಾಡಿದ್ದ. ಆತನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಹೀಗೆ ಅನಿಲ್ ದುಜಾನಾನಿಂದ ಬೆದರಿಕೆಗೆ ಒಳಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಎಸ್ಟಿಎಫ್ ಸಿಬ್ಬಂದಿ ಮತ್ತೆ ಅನಿಲ್ನನ್ನು ಬಂಧಿಸಲು ಹೋಗಿದ್ದರು. ಆದರೆ ಅನಿಲ್ ಮತ್ತು ಆತನ ಗ್ಯಾಂಗ್ ಪೊಲೀಸರ ವಿರುದ್ಧ ಹೋರಾಟಕ್ಕೆ ನಿಂತಿತ್ತು. ಗುಂಡಿನ ದಾಳಿ ನಡೆಸಿತು. ಅದಕ್ಕೆ ಪ್ರತಿಯಾಗಿ ಎಸ್ಟಿಎಫ್ ಸಿಬ್ಬಂದಿಯೂ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಅನಿಲ್ ಮೃತಪಟ್ಟಿದ್ದಾನೆ. ಈ ಘಟನೆ ನಡೆದಿದ್ದು ಒಂದು ದುರ್ಗಮ ಜಾಗದಲ್ಲಿ. ಆ ರಸ್ತೆಯ ಸುತ್ತಲೂ ಎತ್ತರದ ಪೊದೆಗಳು ಇದ್ದವು. ಅನಿಲ್ ಗ್ಯಾಂಗ್ ಅಲ್ಲಿಯೇ ಅಡಗಿಕೊಂಡಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬರಬೇಕಿದೆ.
ಇತ್ತೀಚೆಗೆ ಹತ್ಯೆಗೀಡಾದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್ನನ್ನು ಝಾನ್ಸಿಯಲ್ಲಿ ಉತ್ತರ ಪ್ರದೇಶ ಪೊಲೀಸ್ ಎನ್ಕೌಂಟರ್ ಮಾಡಿದ್ದರು. ಫೆಬ್ರವರಿಯಲ್ಲಿ ಹತ್ಯೆಗೀಡಾದ ವಕೀಲ ಉಮೇಶ್ ಪಾಲ್ ಅವರ ಕೊಲೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಈ ಎನ್ಕೌಂಟರ್ಗಳೆಲ್ಲ ಇನ್ನೂ ಚರ್ಚೆಯಲ್ಲಿ ಇರುವಾಗಲೇ ಈಗ ಅನಿಲ್ ದುಜಾನಾ ಹತ್ಯೆಯಾಗಿದೆ.
ಇದನ್ನೂ ಓದಿ: ಅಪ್ಪ ಅತೀಕ್ ಅಹ್ಮದ್ ಕಟ್ಟಿಕೊಟ್ಟಿದ್ದ ವ್ಯವಸ್ಥಿತ ಕ್ರಿಮಿನಲ್ ಗೂಡಿನಿಂದ ಹೊರಬಂದು ಪೊಲೀಸರ ಬಲೆಗೆ ಬಿದ್ದು ಜೀವ ಬಿಟ್ಟ ಅಸಾದ್!