Site icon Vistara News

Gangster Duo: ಮಾ. 12ರಂದು ಗ್ಯಾಂಗ್‌ಸ್ಟರ್‌ ಜೋಡಿ ಅನುರಾಧಾ-ಸಂದೀಪ್ ವಿವಾಹ; ಏನಿವರ ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌?

Gangster Duo

Gangster Duo

ನವದೆಹಲಿ: ಗ್ಯಾಂಗ್‌ಸ್ಟರ್‌ ಜೋಡಿ (Gangster Duo) ರಾಜಸ್ಥಾನದ ಅನುರಾಧಾ ಚೌಧರಿ ಅಲಿಯಾಸ್ ‘ಮೇಡಮ್ ಮಿಂಜ್’ (Anuradha Choudhary alias Madam Minz) ಮತ್ತು ಹರ್ಯಾಣದ ಸಂದೀಪ್ ಅಲಿಯಾಸ್ ಕಲಾ ಜತೇಡಿ (Sandeep alias Kala Jathedi) ಮಾರ್ಚ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಈ ವಿವಾಹದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಸುಮಾರು ನಾಲ್ಕು ವರ್ಷಗಳ ಪ್ರೀತಿಯ ನಂತರ ಈ ಗ್ಯಾಂಗ್‌ಸ್ಟರ್‌ ಜೋಡಿ ಮಾರ್ಚ್ 12ರಂದು ಹರ್ಯಾಣದ ಸೋನಿಪತ್‌ನಲ್ಲಿ ವಿವಾಹವಾಗಲಿದ್ದಾರೆ. ಅಚ್ಚರಿ ಎಂದರೆ ಸಂದೀಪ್ ತನ್ನ ಮದುವೆಗಾಗಿ ಕೇವಲ ಆರು ಗಂಟೆಗಳ ಕಾಲ ಜಾಮೀನಿನ ಮೇಲೆ ಹೊರಗೆ ಬರಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಕೋರ್ಟ್‌ ಸಂದೀಪ್‌ಗೆ ಜಾಮೀನು ಮಂಜೂರು ಮಾಡಿದ್ದರೆ, ಅನುರಾಧಾ ಜಾಮೀನಿನ ಮೇಲೆ ಹೊರಗಿದ್ದಾಳೆ. ಈ ʼಕ್ರಿಮಿನಲ್‌ʼಗಳ ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜೋಡಿಯ ಕ್ರಿಮಿನಲ್‌ ಹಿನ್ನೆಲೆ

ಈ ಇಬ್ಬರ ಕ್ರಿಮಿನಲ್‌ ಹಿನ್ನಲೆ ಭಯಾನಕವಾಗಿದೆ. ಹತ್ಯೆಗೀಡಾದ ದರೋಡೆಕೋರ ಆನಂದಪಾಲ್ ಸಿಂಗ್‌ನ ಆಪ್ತೆ ಅನುರಾಧಾ ವಿರುದ್ಧ ರಾಜಸ್ಥಾನ ಮತ್ತು ದೆಹಲಿಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಹಣ ಅಕ್ರಮ ವರ್ಗಾವಣೆ, ಅಪಹರಣ, ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಅರ್ಧ ಡಜನ್‌ಗೂ ಅಧಿಕ ಕೇಸ್‌ ಆಕೆಯ ಹೆಸರಿನಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಸಂದೀಪ್‌ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ನ ನಿಕಟವರ್ತಿ. ಈತ ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ದರೋಡೆ, ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಹನ್ನೆರಡಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. 2021ರ ಜುಲೈ 30ರಂದು ಇವರು ಯಮುನಾ ನಗರ-ಸಹರಾನ್ಪುರ ಹೆದ್ದಾರಿಯ ಧಾಬಾ ಬಳಿ ಸಿಕ್ಕಿ ಬಿದ್ದಿದ್ದರು. ದೆಹಲಿ ಪೊಲೀಸ್ ವಿಶೇಷ ಸೆಲ್ ತಂಡವು ಬಂಧಿಸುವ ವೇಳೆ ಇವರು ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.

2020ರಲ್ಲಿ ಅನುರಾಧಾ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಂದೀಪ್‌ನನ್ನು ಮೊದಲ ಭಾರಿ ಭೇಟಿಯಾಗಿದ್ದಳು. ಆನಂದಪಾಲ್ ಸಹೋದರ ವಿಕ್ಕಿ ಸಿಂಗ್ ಮೂಲಕ ಇವರಿಬ್ಬರು ಪರಸ್ಪರ ಪರಿಚಿತರಾಗಿದ್ದರು. ಅಂದಿನಿಂದ ಇವರು ಪ್ರೀತಿಸತೊಡಗಿದ್ದರು. ಬಳಿಕ ಇಬ್ಬರು ಇಂದೋರ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನಂತರ 2021ರ ಮಾರ್ಚ್‌ನಲ್ಲಿ ಇವರು ಬಿಹಾರಕ್ಕೆ ತೆರಳಿ ಅಲ್ಲಿ ಕೆಲವು ದಿನಗಳ ಕಾಲ ತಂಗಿದ್ದರು. ಜೂನ್‌ನಲ್ಲಿ ಅಲ್ಲಿಂದ ಅವರು ಉತ್ತರ ಪ್ರದೇಶದ ಲಕ್ನೋಗೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಶಿರಡಿ, ಉತ್ತರ ಪ್ರದೇಶದ ಮಥುರಾಗೂ ಹೋಗಿದ್ದರು. ಅರೆಸ್ಟ್‌ ಆಗುವ ಮುನ್ನ ಅವರು ಕೆಲವು ದಿನಗಳ ಕಾಲ ಉತ್ತರಾಖಂಡದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Encounter in UP: ವಾರದ ಅಂತರದಲ್ಲಿ ಯೋಗಿ ನಾಡಲ್ಲಿ ಮತ್ತೊಂದು ಎನ್‌ಕೌಂಟರ್‌; ಕೊಲೆ ಆರೋಪಿ ಫಿನಿಶ್‌

ಅನುರಾಧಾಗೆ ಇದು ಎರಡನೇ ಮದುವೆ

ಅನುರಾಧಾ ತನ್ನ ಮೊದಲ ಪತಿ ದೀಪಕ್ ಮಿಂಜ್‌ನಿಂದಾಗಿ ‘ಮಿಂಜ್’ ಎಂಬ ಸರ್‌ನೇಮ್‌ ಪಡೆದಿದ್ದಳು. ಇವರಿಬ್ಬರು 2007ರಲ್ಲಿ ವಿವಾಹವಾಗಿದ್ದರು ಮತ್ತು 2013ರಲ್ಲಿ ಬೇರ್ಪಟ್ಟಿದ್ದರು. ಅನುರಾಧಾ ಎಂಬಿಎ ಓದಿದ್ದಾಳೆ. ರಾಜಸ್ಥಾನದ ಗ್ಯಾಂಗ್‌ಸ್ಟರ್‌ ಆನಂದಪಾಲ್ ಸಿಂಗ್‌ ಜತೆಗೆ ಕೈ ಜೋಡಿಸಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು. ಸೋನಿಪತ್‌ನ ಜತೇಡಿ ಗ್ರಾಮದ ನಿವಾಸಿ ಸಂದೀಪ್ ಐಟಿಐ ವಿದ್ಯಾರ್ಥಿಯಾಗಿದ್ದ ವೇಳೆ ಕೆಟ್ಟ ಸ್ನೇಹಿತರ ಸಹವಾಸ ಮಾಡಿ ಸಮಾಜ ವಿದ್ರೋಹಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2021ರ ಮೇಯಲ್ಲಿ ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧನ್ಕರ್ ಅವರ ಹತ್ಯೆಯ ನಂತರ ಸಂದೀಪ್ ಹೆಸರು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಸಂದೀಪ್‌ ಧನ್ಕರ್‌ನ ನಿಕಟವರ್ತಿಯಾಗಿದ್ದ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version