ಚಂಡೀಗಢ: ಪಂಜಾಬ್‌ನ ತರನ್ ತಾರನ್ ಜೈಲಿನಲ್ಲಿ ತಮ್ಮ ಪ್ರತಿಸ್ಪರ್ಧಿ ಗುಂಪಿನ ಇಬ್ಬರನ್ನು ಹತ್ಯೆ ಮಾಡಿ, ಅದನ್ನು ಸೆಲೆಬ್ರೆಟ್ ಮಾಡಿದ ಗ್ಯಾಂಗಸ್ಟರ್‌ಗಳ ವಿಡಿಯೋ ಭಾನುವಾರ ಫುಲ್ ವೈರಲ್ ಆಗಿದ್ದು, ಪಂಜಾಬ್ ಪೊಲೀಸರಿಗೆ ತೀವ್ರ ಮುಜುಗರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲ್ ಸೂಪರಿಟೆಂಡೆಂಟ್ ಸೇರಿದಂತೆ ಐವರು ಜೈಲ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕಳೆದ ಭಾನುವಾರ ತರನ್ ತಾರನ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದಂತೆ ಏಳು ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾನುವಾರ ವೈರಲ್ ಆದ ವಿಡಿಯೋದಲ್ಲಿ ಹತ್ಯೆ ಮಾಡಿದ ಶವಗಳತ್ತ ಗ್ಯಾಂಗ್‌ಸ್ಟರ್‌ಗಳು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಹತ್ತಿರದಲ್ಲೇ ಪೊಲೀಸ್ ಸುಮ್ಮನೆ ನಿಂತಿರುವುದನ್ನು ನೋಡಬಹುದಾಗಿದೆ.
ಗಾಯಕ ಸಿದ್ದು ಮೂಸೆವಾಲ ಹತ್ಯೆ ಪ್ರಕರಣದ ಆರೋಪಿಗಳಾದ ಬಟಾಲದ ಮನದೀಪ್ ಸಿಂಗ್ ಅಲಿಯಾಸ್ ತೂಫಾನ್ ಮತ್ತು ಬುದ್ದಲದ ನಿವಾಸಿ ಮನಮೋಹನ್ ಸಿಂಗ್ ಅಲಿಯಾಸ್ ಮೋಹ್ನಾ ಕೈದಿಗಳ ನಡುವಿನ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಆರಂಭದ ತನಿಖೆಯಲ್ಲಿ ಇಬ್ಬರು ಗ್ಯಾಂಗ್‌ಗಳ ನಡುವಿನ ಸಂಘರ್ಷ ಇದಾಗಿದೆ. ಜಗ್ಗು ಭಗವಾನ್‌ಪುರಿಯಾ ಮತ್ತು ಲಾರೆನ್ಸ್ ಬಿಶ್ಣೋಯಿ ಗ್ಯಾಂಗ್‌ಗಳ ನಡುವೆ ಹೊಡೆದಾಟ ಸಂಭವಿಸಿದೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆಯ ರೂವಾರಿ, ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ
ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆಲವು ಸದಸ್ಯರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾದ ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೊದಲ್ಲಿ, ಸಚಿನ್ ಭಿವಾನಿ ಎಂದು ತನ್ನನ್ನು ತಾನು ಗುರುತಿಸಿಕೊಂಡ ಕೈದಿಯೊಬ್ಬರು ಕೊಲೆಯಾದ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ ಸಹಾಯಕ ಎಂದು ಹೇಳಿಕೊಂಡಿದ್ದಾನೆ.