Site icon Vistara News

Garlic: ಬೆಳ್ಳುಳ್ಳಿ ತರಕಾರಿಯೋ, ಮಸಾಲೆ ಪದಾರ್ಥವೋ? ಗೊಂದಲಕ್ಕೆ ತೆರೆ ಎಳೆದ ಹೈಕೋರ್ಟ್‌ ತೀರ್ಪಿನಲ್ಲಿ ಏನಿದೆ?

Garlic

ಭೋಪಾಲ್‌: ನಾವು ಪ್ರತಿ ದಿನ ಅಡುಗೆಗಳಲ್ಲಿ ಬಳಸುವ ಬೆಳ್ಳುಳ್ಳಿ (Garlic) ತರಕಾರಿಯೋ ಅಥವಾ ಮಸಾಲೆ ಪದಾರ್ಥವೋ ಎಂಬ ಸುಮಾರು 1 ದಶಕದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುದೀರ್ಘ ವಿಚಾರಣೆ, ಕಾನೂನು ಹೋರಾಟದ ನಂತರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ (Indore bench of the Madhya Pradesh High Court)ವು ನಿರ್ಣಾಯಕ ತೀರ್ಪು ಪ್ರಕಟಿಸಿದ್ದು, ಬೆಳ್ಳುಳ್ಳಿಯೂ ತರಕಾರಿ ಎಂದು ಹೇಳಿದೆ.

ಬೆಳ್ಳುಳ್ಳಿ ತರಕಾರಿಯೇ ಅಥವಾ ಮಸಾಲೆ ಪದಾರ್ಥವೇ ಎನ್ನುವ ಪ್ರಕರಣದಲ್ಲಿ ಬೆಳ್ಳುಳ್ಳಿಯನ್ನು ಮೂಲವಾಗಿರಿಸಿ ಚರ್ಚೆಯನ್ನು ನಡೆಸಲಾಗಿದೆ. ಅಂತೂ ಬೆಳ್ಳುಳ್ಳಿ ಒಂದು ತರಕಾರಿಯ ವಿಧ ಎಂದು ಕೋರ್ಟ್‌ ಪೀಠ ತೀರ್ಪು ನೀಡುವ ಮೂಲಕ ಹಲವು ವರ್ಷಗಳ ಪ್ರಶ್ನೆಗೆ ಉತ್ತರ ನೀಡಿದೆ. ಮುಖ್ಯವಾಗಿ ಬೆಳ್ಳುಳ್ಳಿಯ ಕೊಳೆಯುವ ಸ್ವಭಾವವನ್ನು ತೀರ್ಪಿನಲ್ಲಿ ಪ್ರಮುಖ ಅಂಶವಾಗಿ ಉಲ್ಲೇಖಿಸಲಾಗಿದೆ. ಜತೆಗೆ ತರಕಾರಿ ಮತ್ತು ಮಸಾಲೆ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಗೊಂದಲ ಆರಂಭವಾಗಿದ್ದು ಯಾವಾಗ?

ಬೆಳ್ಳುಳ್ಳಿ ಬಗ್ಗೆ ಗೊಂದಲ ಆರಂಭವಾಗಿದ್ದು 2015ರಲ್ಲಿ. ಅಂದು ಮಧ್ಯಪ್ರದೇಶದ ರೈತ ಸಂಘಟನೆಯೊಂದು ಬೆಳ್ಳುಳ್ಳಿಯನ್ನು ತರಕಾರಿ ಎಂದು ವರ್ಗೀಕರಿಸಲು ಮಂಡಿ ಮಂಡಳಿಯನ್ನು ಮನವೊಲಿಸಿದಾಗ ಈ ವಿವಾದವು ಪ್ರಾರಂಭವಾಯಿತು. ಆದಾಗ್ಯೂ ಕೃಷಿ ಇಲಾಖೆ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತು. 1972ರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯಡಿ ಬೆಳ್ಳುಳ್ಳಿಯನ್ನು ಮಸಾಲೆ ಎಂದು ಮರು ವರ್ಗೀಕರಿಸಿತು. ಆ ಮೂಲಕ ಬೆಳ್ಳುಳ್ಳಿಯ ವಿಚಾರದಲ್ಲಿ ಗೊಂದಲ ಮೂಡಿತು. ಇದು ಕಾನೂನು ಸಮರಕ್ಕೆ ದಾರಿ ಮಾಡಿ ಕೊಟ್ಟಿತು.

2017ರಲ್ಲಿ ಹೈಕೋರ್ಟ್‌ ʼಬೆಳ್ಳುಳ್ಳಿ ಒಂದು ತರಕಾರಿʼ ಎಂಬ ತೀರ್ಪು ನೀಡಿತು. ಆ ತೀರ್ಪನ್ನು ಇದೀಗ ನ್ಯಾ.ಎಸ್.ಎ.ಧರ್ಮಾಧಿಕಾರಿ ಮತ್ತು ಡಿ.ವೆಂಕಟರಮಣ ಅವರಿದ್ದ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.

ಟೀಕೆ ವ್ಯಕ್ತವಾಗಿತ್ತು

2017ರಲ್ಲಿ ಏಕ ಸದಸ್ಯ ಪೀಠವು ಬೆಳ್ಳುಳ್ಳಿಯನ್ನು ತರಕಾರಿ ಎಂದು ವರ್ಗೀಕರಿಸಿ ರೈತ ಸಂಘದ ಪರವಾಗಿ ತೀರ್ಪು ನೀಡಿದಾಗ ಈ ನಿರ್ಧಾರಕ್ಕೆ ಉದ್ಯಮಿಗಳಿಂದ ಟೀಕೆ ವ್ಯಕ್ತವಾಯಿತು. ಈ ತೀರ್ಪು ಮುಖ್ಯವಾಗಿ ರೈತರಿಗಿಂತ ಕಮಿಷನ್ ಏಜೆಂಟರಿಗೆ ಲಾಭವಾಗಿದೆ ಎಂದು ವಾದಿಸಲಾಯಿತು. ಬಳಿಕ ಅರ್ಜಿದಾರ ಮುಖೇಶ್ ಸೋಮಾನಿ 2017ರಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದರು. ಆ ಮೂಲಕ ಪ್ರಕರಣ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠದ ಮುಂದೆ ಬಂತು. 2024ರ ಜನವರಿಯಲ್ಲಿ ಈ ನ್ಯಾಯಪೀಠವು ಬೆಳ್ಳುಳ್ಳಿಯನ್ನು ಮಸಾಲೆ ಎಂದು ಮರು ವರ್ಗೀಕರಿಸುವ ತೀರ್ಪನ್ನು ರದ್ದುಗೊಳಿಸಿತು. ಆರಂಭಿಕ ನಿರ್ಧಾರವು ಮುಖ್ಯವಾಗಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತಿತ್ತು, ಬೆಳ್ಳುಳ್ಳಿ ಬೆಳೆಯುವ ರೈತರಿಗೆ ಅಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತು.

ಇದನ್ನೂ ಓದಿ: DK Shivakumar: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬೆಳ್ಳುಳ್ಳಿ ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರು ಈ ವರ್ಷದ ಮಾರ್ಚ್‌ನಲ್ಲಿ ಆ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದರು. ಮತ್ತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು 2017ರ ಆದೇಶವನ್ನು ಎತ್ತಿ ಹಿಡಿದು ಬೆಳ್ಳುಳ್ಳಿಯನ್ನು ತರಕಾರಿ ಎಂದೇ ತೀರ್ಮಾನಿಸಿದೆ. ಸದ್ಯ ಬೆಳ್ಳುಳ್ಳಿ ವ್ಯಾಪಾರದಲ್ಲಿ ಇರುವ ನಿರ್ಬಂಧಗಳನ್ನು ತೆಗೆದುಹಾಕುವ ನಿರೀಕ್ಷೆ ಇದೆ. ಹೀಗಾದಲ್ಲಿ ಉತ್ಪಾದಕರು ಮತ್ತು ಮಾರಾಟಗಾರರಿಗೂ ಹೊಸ ಅವಕಾಶ ತೆರೆದುಕೊಳ್ಳಲಿದೆ.

Exit mobile version