ಗುವಾಹಟಿ: ದೇಶದ ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಸೇರಿ ಎಲ್ಲ ಕಡೆ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ (Menstrual Leave) ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯವು (Gauhati University) ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಗುವಾಹಟಿ ವಿವಿಯಲ್ಲಿ ಅಧ್ಯಯನ ಮಾಡುವ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿದೆ. ವಿವಿ ನಿರ್ಧಾರದ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮುಟ್ಟಿನ ರಜೆ ಕುರಿತು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಪ್ರಕಟಣೆ ಹೊರಡಿಸಿದೆ. ಕೇಂದ್ರ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (MWCD) ಮಾರ್ಗಸೂಚಿಯಂತೆ ಮುಟ್ಟಿನ ರಜೆ ಘೋಷಿಸಲಾಗಿದೆ. “ಎಂಡಬ್ಲ್ಯೂಸಿಡಿ ನಿರ್ದೇಶನದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಶೇ.2ರಷ್ಟು ಮುಟ್ಟಿನ ರಜೆ ಘೋಷಿಸಲಾಗಿದೆ. ಗುವಾಹಟಿ ವಿಶ್ವವಿದ್ಯಾಲಯದ ಕ್ಯಾಂಪಸ್ ಮಾತ್ರವಲ್ಲ, ವಿವಿಯಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲೂ ಇದೇ ನಿಯಮ ಜಾರಿಗೆ ಬರಲಿದೆ” ಎಂದು ಮಾಹಿತಿ ನೀಡಿದೆ.
Gauhati University introduces menstrual leaves for students
— ANI Digital (@ani_digital) November 10, 2023
Read @ANI Story | https://t.co/atXMzCCGrG#GauhatiUniversity #menstrualleaves pic.twitter.com/33Kg5f7hJW
ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್‌ನಲ್ಲಿ ಆಯಾ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವು ಶೇ.75ರಷ್ಟು ಇರಬೇಕು. ಇಷ್ಟು ಹಾಜರಾತಿ ಇದ್ದರೆ ಮಾತ್ರ ಆ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಅರ್ಹ. ಆದರೆ, ವಿಶ್ವವಿದ್ಯಾಲಯದ ಹೊಸ ನಿಯಮಗಳ ಪ್ರಕಾರ, ವಿದ್ಯಾರ್ಥಿನಿಯರಿಗೆ ಶೇ.2ರಷ್ಟು ಮುಟ್ಟಿನ ರಜೆ ನೀಡಲಾಗಿದೆ. ಅಂದರೆ, ವಿದ್ಯಾರ್ಥಿನಿಯರ ಹಾಜರಾತಿ ಪ್ರಮಾಣವು ಶೇ.73ರಷ್ಟು ಇದ್ದರೂ ಸಾಕು, ಅವರು ಪರೀಕ್ಷೆಗೆ ಹಾಜರಾಗಬಹುದಾಗಿದೆ.
ಇದನ್ನೂ ಓದಿ: Menstrual Leave: ಮುಟ್ಟಿನ ರಜೆ ನೀತಿ ಜಾರಿಗೆ ತನ್ನಿ, ಕೇಂದ್ರ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
ಕೇರಳದ ಎಲ್ಲ ವಿವಿಗಳಲ್ಲಿ ಮುಟ್ಟಿನ ರಜೆ
ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ನೀಡುವ ಕುರಿತು ಕೇರಳ ಸರ್ಕಾರವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಕೇರಳದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆ ನೀಡಲಾಗಿದೆ. ಮುಟ್ಟಿನ ರಜೆ ನೀಡಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿದೆ. ಕೇರಳದಲ್ಲಿ ಮೊದಲ ಬಾರಿಗೆ ಕೊಚ್ಚಿನ್ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿತ್ತು. ಇದನ್ನೇ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಜಾರಿಗೆ ತಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ