Site icon Vistara News

Gautam Adani: ಶರದ್ ಪವಾರ್ ಮನೆಗೆ ಗೌತಮ್ ಅದಾನಿ; ಎರಡು ಗಂಟೆ ಮಾತುಕತೆ!

Gautam Adani meets Sharad Pawar in Mumbai

ಮುಂಬೈ, ಮಹಾರಾಷ್ಟ್ರ: ಅದಾನಿ ಗ್ರೂಪ್ ಷೇರುಗಳ ಅವ್ಯವಹಾರ ಪ್ರಕರಣದ ವಿಚಾರಣೆಗೆ ಸಂಸದೀಯ ಜಂಟಿ ಸಮಿತಿ(JPC) ಅಗತ್ಯವಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(NCP)ದ ನಾಯಕ ಶರದ್ ಪವಾರ್ (Sharad Pawar) ಈ ಹಿಂದೆ ಹೇಳಿದ್ದರು. ಈಗ ಉದ್ಯಮಿ ಗೌತಮ್ ಅದಾನಿ (Gautam Adani) ಅವರು, ಶರದ್ ಪವಾರ್ ಅವರ ಸೌತ್ ಮುಂಬೈನಲ್ಲಿರುವ ಸಿಲ್ವರ್ ಓಕ್ ಮನೆಯಲ್ಲಿ ಗುರುವಾರ ಬೆಳಗ್ಗೆ ಅವರನ್ನು ಭೇಟಿಯಾಗಿದ್ದಾರೆ. ಉಭಯತ್ರರು ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆಗೆ ಅದಾನಿ ಅವರು ಶರದ್ ಪವಾರ್ ಮನೆಗೆ ತೆರಳಿದರು. ಈ ವೇಳೆ ಅದಾನಿ ಮತ್ತು ಪವಾರ್ ದೇಶದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆ ಹಾಗೂ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು ಎಂದು ಎನ್‌ಸಿಪಿ ಪಕ್ಷದ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.

ಇದನ್ನೂ ಓದಿ: Sharad Pawar: ಗೌತಮ್ ಅದಾನಿ ಕಠಿಣ ಪರಿಶ್ರಮಿ ಎಂದು ಹಾಡಿ ಹೊಗಳಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್!

ಅದಾನಿ ಷೇರು ವ್ಯವಹಾರ ಕುರಿತು ಶಾರ್ಟ್ ಸೆಲ್ಲಿಂಗ್ ಸಂಸ್ಥೆ ಹಿಂಡೆನ್‌ಬರ್ಗ್ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್ ಷೇರುಗಳು ಪಾತಾಳ ಕಂಡು, ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ. ನಷ್ಟವಾಗಿತ್ತು. ಈ ಕುರಿತು ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳು ಸಂಸತ್ ಕಲಾಪದಲ್ಲಿ ಪಟ್ಟು ಹಿಡಿದಿದ್ದವು. ಈ ಅವ್ಯವಹಾರ ಕುರಿತು ಜೆಪಿಸಿ ಮೂಲಕ ತನಿಖೆಗೆ ಒತ್ತಾಯಿಸಿದ್ದವು. ಆದರೆ, ಇತ್ತೀಚೆಗ ಟಿವಿ ಸಂದರ್ಶನವೊಂದರಲ್ಲಿ ಅದಾನಿ ವ್ಯವಹಾರ ಕುರಿತು ಜೆಪಿಸಿ ತನಿಗೆ ವಿರೋಧವಿದೆ ಎಂದು ಪವಾರ್ ಹೇಳಿದ್ದರು. ಈ ಬೆಳವಣಿಗೆ ಬಳಿಕ ಅದಾನಿ ಮತ್ತು ಪವಾರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಅದಾನಿ ಗ್ರೂಪ್ ಬಹುಪಾಲು ಷೇರ್ ಹೊಂದಿರುವ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪವಾರ್ ಅವರು, ಜೆಪಿಸಿ ತನಿಖೆಯ ಕಾಂಗ್ರೆಸ್‌ನ ಬೇಡಿಕೆಯಿಂದ ತಾವು ದೂರವಿರುವುದಾಗಿ ಹೇಳಿದ್ದರು. ಅಲ್ಲದೇ ಈ ವಿಷಯದ ಬಗ್ಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಂಸತ್ತನ್ನು ಸ್ಥಗಿತಗೊಳಿಸುವುದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

Exit mobile version