ನವದೆಹಲಿ: ಟೆಕ್ಸ್‌ಟೈಲ್ (Textile) ಮತ್ತು ರಿಯಲ್ ಎಸ್ಟೇಟ್ (Real Estate) ಕ್ಷೇತ್ರದ ದೈತ್ಯ ಕಂಪನಿ ರೇಮಂಡ್ ಲಿ.ನ (Raymond Ltd) ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, ಆಗರ್ಭ ಶ್ರೀಮಂತ ಗೌತಮ್ ಸಿಂಘಾನಿಯಾ (Gautam Singhania) ತಮ್ಮ ಪತ್ನಿ ನವಾಜ್ ಮೋದಿ (Nawaz Modi) ಅವರಿಂದ ವಿಚ್ಛೇದನ ಪಡೆಯುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಇದೀಗ ನವಾಜ್ ಮೋದಿ ಸಿಂಘಾನಿಯಾ (53) ಬಹೃತ್ ಮೊತ್ತದ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೌತಮ್ ಸಿಂಘಾನಿಯಾ ತಮ್ಮ 1.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನಲ್ಲಿ 75% ಅನ್ನು ತಮ್ಮ ಇಬ್ಬರು ಹೆಣ್ಣುಮಕ್ಕಳಾದ ನಿಹಾರಿಕಾ, ನಿಸಾ ಹಾಗೂ ತಮಗೆ ನೀಡಬೇಕು ಎಂದು ನವಾಜ್ ಮೋದಿ ಕೋರಿದ್ದಾರೆ. ಸಿಂಘಾನಿಯಾ ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಷರತ್ತು ವಿಧಿಸಿದ್ದಾರೆ. ಅವರು ಏಕೈಕ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಕುಟುಂಬ ಟ್ರಸ್ಟ್ ಸ್ಥಾಪಿಸಿ ಕುಟುಂಬದ ಸಂಪತ್ತು ಮತ್ತು ಆಸ್ತಿಗಳನ್ನು ಅದಕ್ಕೆ ವರ್ಗಾಯಿಸಲಾಗುವುದು. ಅವರ ಮರಣದ ನಂತರ ಕುಟುಂಬ ಸದಸ್ಯರು ವಾರಸುದಾರರಾಗಿತ್ತಾರೆ ಎಂದು ಗೌತಮ್ ಸಿಂಘಾನಿಯಾ ಸಲಹೆ ನೀಡಿದ್ದರು. ಆದರೆ ಇದಕ್ಕೆ ನವಾಜ್ ಒಪ್ಪಿಗೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಗೌತಮ್ ಅವರ ಆಸ್ತಿಯ ಮೌಲ್ಯ 11,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
— Gautam Singhania (@SinghaniaGautam) November 13, 2023
ಖೈತಾನ್ ಆ್ಯಂಡ್ ಕಂಪನಿಯ ಹಿರಿಯ ಪಾಲುದಾರ ಹಯಗ್ರೀವ್ ಖೈತಾನ್ ಅವರನ್ನು ಗೌತಮ್ ಸಿಂಘಾನಿಯಾ ಅವರ ಕಾನೂನು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಇತ್ತ ನವಾಜ್ ಮುಂಬೈ ಮೂಲದ ಕಾನೂನು ಸಂಸ್ಥೆ ರಶ್ಮಿ ಕಾಂತ್ ಅನ್ನು ಕಾನೂನು ಸಲಹೆಗಾಗಿ ಸಂಪರ್ಕಿಸಿದ್ದಾರೆ. ʼʼಪರಿಹಾರ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ವಿಶೇಷವಾಗಿ ದಂಪತಿ ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.
“ಎರಡೂ ಕಡೆಯವರು ತೆಗೆದುಕೊಂಡ ಆರಂಭಿಕ ನಿಲುವಿನ ನಂತರ ಹೆಚ್ಚಿನ ಬೆಳವಣಿಗೆ ಕಂಡು ಬಂದಿಲ್ಲ. ನವಾಜ್ ಮತ್ತು ಗೌತಮ್ ಇಬ್ಬರೂ ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅದು ಅವರಿಬ್ಬರಿಗೆ ಆದ್ಯತೆಯ ವಿಷಯ” ಎಂದು ಮೂಲಗಳು ಹೇಳಿವೆ.
ಸಾಲಿಸಿಟರ್ ಆಗಿದ್ದ ನಾದರ್ ಮೋದಿ ಅವರ ಪುತ್ರಿ ನವಾಜ್ ಅವರನ್ನು ಸಿಂಘಾನಿಯಾ 32 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ 32 ವರ್ಷಗಳ ಸಂಬಂಧವನ್ನು ಕಡಿದುಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದರು. “ಅಷ್ಟು ಹಿತೈಷಿಗಳಲ್ಲದವರು ನಮ್ಮ ಜೀವನದ ಸುತ್ತಲೂ ಸಾಕಷ್ಟು ಆಧಾರರಹಿತ ವದಂತಿಗಳನ್ನು ಹರಡಿದ್ದಾರೆ. ನವಾಜ್ ಮತ್ತು ನಾನು ಇಲ್ಲಿಂದ ವಿಭಿನ್ನ ಮಾರ್ಗಗಳಲ್ಲಿ ಸಂಚರಿಸುತ್ತೇವೆʼʼ ಎಂದಷ್ಟೇ ಬರೆದುಕೊಂಡಿದ್ದರು. ಸ್ಪಷ್ಟ ಕಾರಣ ಬಹಿರಂಗಪಡಿಸಿರಲಿಲ್ಲ.
ಇದನ್ನೂ ಓದಿ: ಹೆಂಡತಿಯಿಂದ ಪ್ರತ್ಯೇಕವಾದ ರೇಮಂಡ್ ಚೇರ್ಮನ್ ಗೌತಮ್ ಸಿಂಘಾನಿಯಾ!
ನವಾಜ್ ʼಬಾಡಿ ಆರ್ಟ್ʼ ಎಂಬ ಫಿಟ್ನೆಸ್ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಇದರ ಹೊರತಾಗಿ ಅವರು ದಕ್ಷಿಣ ಮುಂಬೈಯ ಮೊದಲ ಏರೋಬಿಕ್ಸ್ ಮತ್ತು ಕ್ಷೇಮ ತಜ್ಞರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅಲ್ಲದೆ ರೇಮಂಡ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.
ಕಂಪನಿಯು 2023ರ ಹಣಕಾಸು ವರ್ಷದಲ್ಲಿ 536.9 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇಂಡೋನೇಷ್ಯಾ, ಇಂಗ್ಲೆಂಡ್, ಅಮೇರಿಕ, ಸ್ವಿಜರ್‌ಲ್ಯಾಂಡ್ ಮುಂತಾದ ಕಡೆಗಳಿಗೆ ವ್ಯವಹಾರ ವಿಸ್ತರಿಸಿರುವ ರೇಮಂಡ್ ಗ್ರೂಪ್ ಉಡುಪು ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಂಜಿನಿಯರಿಂಗ್, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ (ಸಿಂಘಾನಿಯಾ ಸ್ಕೂಲ್ಸ್) ರಂಗದಲ್ಲೂ ಛಾಪು ಮೂಡಿಸಿದೆ. ರೇಮಂಡ್ 2019ರಲ್ಲಿ ಮುಂಬೈ ಬಳಿಯ ಥಾಣೆಯಲ್ಲಿ ವಸತಿ ಯೋಜನೆಯನ್ನು ಪ್ರಾರಂಭಿಸುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ