ಚೆನ್ನೈ: ತಮಿಳುನಾಡಿನ ಬಿಜೆಪಿಯ ನಾಯಕಿ ಗಾಯತ್ರಿ ರಘುರಾಂ (Gayathri Raghuram) ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ. ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲವಾದ ಕಾರಣ ತಾವು ಈ ನಿರ್ಧಾರ ತೆಗೆದುಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Annamalai | 5 ಲಕ್ಷ ರೂ. ದುಬಾರಿ ರಫೇಲ್ ಕೈಗಡಿಯಾರವನ್ನು ದೇಶಭಕ್ತಿ ಪ್ರತೀಕವಾಗಿ ಧರಿಸುತ್ತಿದ್ದೇನೆ ಎಂದ ಅಣ್ಣಾಮಲೈ
ಗಾಯತ್ರಿ ರಘುರಾಂ ಅವರು ಕೆಲ ದಿನಗಳ ಹಿಂದೆ ಬಿಜೆಪಿ ನಾಯಕ ತಿರುಚಿ ಸೂರ್ಯ ಅವರ ವಿರುದ್ಧ ಧ್ವನಿ ಎತ್ತಿದ್ದರು. ಸೂರ್ಯ ಅವರು ಮಹಿಳಾ ಸಹೋದ್ಯೋಗಿಯೊಂದಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ಆಡಿಯೋ ಕ್ಲಿಪ್ ವಿಚಾರದಲ್ಲಿ ಅವರು ಆಕ್ರೋಶ ಹೊರಹಾಕಿದ್ದರು. ಅದರ ಬೆನ್ನಲ್ಲೇ ಗಾಯತ್ರಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಅದರಿಂದಾಗಿ ಮನನೊಂದಿರುವ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಈ ವಿಚಾರವಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯತ್ರಿ, “ಭಾರವಾದ ಮನಸ್ಸಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ತಮಿಳುನಾಡು ಬಿಜೆಪಿಯು ಮಹಿಳೆಯರಿಗೆ ಗೌರವ ಕೊಡುತ್ತಿಲ್ಲ ಹಾಗೂ ವಿಚಾರಣೆಗೆ ಅವಕಾಶವನ್ನೂ ಕೊಡುತ್ತಿಲ್ಲ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಕಾರ್ಯಕರ್ತರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇಂದಿನ ನನ್ನ ಈ ನಿರ್ಧಾರಕ್ಕೆ ಅಣ್ಣಾಮಲೈ ಅವರೇ ಕಾರಣ. ಇನ್ನು ಮುಂದೆ ನಾನು ಅವರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಇರುವುದಕ್ಕಿಂತ ಹೊರಗಿನವಳಾಗಿದ್ದುಕೊಂಡು ಟ್ರೋಲ್ ಆಗುವುದೇ ಒಳಿತು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಮಾತುಗಳು ಇಡೀ ದೇಶದಲ್ಲಿ ಕಂಪನ ಸೃಷ್ಟಿಸುತ್ತಿವೆ; ಕೈ ನಾಯಕನನ್ನು ಹೊಗಳಿದ ತಮಿಳುನಾಡು ಮುಖ್ಯಮಂತ್ರಿ
ಹಾಗೆಯೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಮಾತನಾಡಿರುವ ಅವರು, “ಮೋದಿ ಜೀ, ನೀವು ಯಾವತ್ತಿದ್ದರೂ ವಿಶೇಷವೇ. ನೀವು ಈ ದೇಶದ ತಂದೆ. ನೀವು ಎಂದಿಗೂ ನನ್ನ ವಿಶ್ವಗುರು ಹಾಗೂ ಶ್ರೇಷ್ಠ ನಾಯಕರಾಗಿರುತ್ತೀರಿ. ಅಮಿತ್ ಶಾ ಜೀ ನೀವು ಎಂದಿಗೂ ನನ್ನ ಚಾಣಾಕ್ಯ ಗುರುವಾಗಿರುತ್ತೀರಿ” ಎಂದು ಬರೆದುಕೊಂಡಿದ್ದಾರೆ.