ನವದೆಹಲಿ: ಮಹಾರಾಷ್ಟ್ರದಲ್ಲಿ (Maharashtra Politcs) ದಸರಾ ಹಬ್ಬ (Dussehra Rallies) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (CM Eknath Shinde) ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಅವರ ನಡುವಿನ ಬಲಾಬಲ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿದೆ. ಶಿವ ಸೇನೆಯು ವಿಭಜನೆಯಾದಾಗಿನಿಂದಲೂ ನಾಯಕರಿಬ್ಬರು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುವ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ಆ ಪ್ರವೃತ್ತಿಯು ಈ ವರ್ಷವೂ ಮುಂದುವರಿದಿದೆ. ಲೋಕಸಭೆ ಚುನಾವಣೆಗೆ ಆರೇ ತಿಂಗಳು ಬಾಕಿ ಇರುವಾಗಲೇ ಉಭಯ ನಾಯಕರು ಪರಸ್ಪರ ವಾಕ್ಸಮರ ನಡೆಸಿದರು. “ರಾವಣ” (Ravan) ಮತ್ತು “ಜನರಲ್ ಡೈಯರ್” (General Dyer) ಪದಗಳ ಮೂಲಕ ಪರಸ್ಪರ ನಿಂದಿಸಿದ್ದಾರೆ.
ಜಲಿಯನ್ ವಾಲಾಬಾಗ್‌ನಂತೆ ಸಾರತಿ ಹಳ್ಳಿಗಳಲ್ಲಿ ಮರಾಠರ ಮೇಲೆ ಲಾಠಿಚಾರ್ಜ್ ನಡೆಯಿತು. ಏಕನಾಥ್ ಶಿಂಧೆ ಅವರ ಸರ್ಕಾರ ಜನರಲ್ ಡೈಯರ್ ಸರ್ಕಾರ ಎಂದು ಉದ್ಧವ್ ಠಾಕ್ರೆ ಕಾರ್ಯಕ್ರಮದ ಸಾಂಪ್ರದಾಯಿಕ ಸ್ಥಳವಾದ ದಾದರ್‌ನ ವಿಸ್ತಾರವಾದ ಶಿವಾಜಿ ಪಾರ್ಕ್‌ನಲ್ಲಿ ಆರೋಪಿಸಿದರು. ಈ ಪ್ರದೇಶದಿಂದಲೇ ಉದ್ಧವ್ ಠಾಕ್ರೆ ಅವರ ತಂದೆ, ಬಾಳಾ ಸಾಹೇಬ್ ಠಾಕ್ರೆ ಅವರು ತಮ್ಮ ಆಕ್ರಮಣ ವಾಕ್ಝರಿ ಮೂಲಕ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಆ ಸಂಪ್ರದಾಯವನ್ನು ಉದ್ಧವ್ ಠಾಕ್ರೆ ಕೂಡ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇದೇ ವೇಳೆ, ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಮುಖ್ಯಮಂತ್ರಿ ರಾಜಕೀಯ ಎದುರಾಳಿ(ಉದ್ಧವ್ ಠಾಕ್ರೆ)ಗೆ ರಾವಣ ಎಂದು ಸಂಭೋದಿಸಿದರು. ಸಂತನ ವೇಷದಲ್ಲಿ ಬಂದು ಸೀತೆಯನ್ನು ರಾವಣ ಯಾವ ರೀತಿ ಅಪಹರಿಸಿದರೋ, ಅದೇ ರೀತಿ ಉದ್ಧವ್ ಠಾಕ್ರೆ ಕೂಡ ಮುಖ್ಯಮಂತ್ರಿಯಾಗುವ ಆಸೆಯನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: Maharashtra News: ಮಹಾರಾಷ್ಟ್ರದ ಮತ್ತೊಂದು ಆಸ್ಪತ್ರೆಯಲ್ಲಿ 10 ರೋಗಿಗಳು ಮೃತ! ತನಿಖೆಗೆ ಮುಂದಾದ ಸರ್ಕಾರ
ಉದ್ದವ್ ಠಾಕ್ರೆ ಅವರಿಗೆ ಸಿಎಂ ಆಗಬೇಕೆಂಬ ಆಸೆ ಇತ್ತು. ಆದರೆ, ಅದನ್ನು ತೋರ್ಪಡಿಸುತ್ತಿರಲಿಲ್ಲ. ಕೊನೆಯ ತನಕ ಅವರು ಈ ಬಗ್ಗೆ ಸುಳಿವು ಬಿಟ್ಟುಕೊಡಲಿಲ್ಲ. ರಾವಣ ಯಾವ ರೀತಿ ಸಂತನ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿದರೋ ಅದೇ ರೀತಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಲು ಒಪ್ಪಂದ ಮಾಡಿಕೊಂಡರು. ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರನ್ನೇ ಸೂಚಿಸುವಂತೆ ಶರದ್ ಪವಾರ್ ತಿಳಿಸಲು ಇಬ್ಬರನ್ನು ಕಳುಹಿಸಿಕೊಟ್ಟರು ಎಂದು ಸಿಎಂ ಏಕನಾಥ ಶಿಂಧೆ ಆರೋಪಿಸಿದರು.
ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರವನ್ನು ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದರು. ಆದರೆ, ಠಾಕ್ರೆ ವಿರುದ್ಧ ಬಂಡೆದ್ದ ಏಕನಾಥ್ ಶಿಂಧೆ ಅವರು ಶಿವಸೇನೆಯನ್ನು ವಿಭಜಿಸಿ, ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದರು. ಕಳೆದ ವರ್ಷದಿಂದ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಭಜನೆಯಾಗಿರುವ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ ಶಿಂಧೆ ಬಣ ಎಂದು ಗುರುತಿಸಿಕೊಂಡಿದೆ.