Site icon Vistara News

Video: ಪ್ರತಿಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ ಮದುವೆ ಮಾತುಕತೆ; ಗಡ್ಡದ ಮೇಲೆ ಕಣ್ಣಿಟ್ಟ ಲಾಲು ಪ್ರಸಾದ್ ಯಾದವ್​

Rahul Gandhi And Lalu Prasad Yadav

#image_title

ಬಿಹಾರದ ಪಾಟ್ನಾದಲ್ಲಿ ಇಂದು ನಡೆದ ಪ್ರತಿಪಕ್ಷಗಳ ಸಭೆ (Opposition Meet) ಬಳಿಕ ಪ್ರಮುಖ ನಾಯಕರೆಲ್ಲ ಸೇರಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi)ಯವರ ಮದುವೆ ಮಾತುಕತೆಗೂ ವೇದಿಕೆಯಾಯಿತು. ಆರ್​ಜೆಡಿ (ರಾಷ್ಟ್ರೀಯ ಜನತಾದಳ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಈ ವಿಷಯ ಎತ್ತಿ, ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದರು. ರಾಹುಲ್ ಗಾಂಧಿ ಬೇಗನೇ ಮದುವೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಗಡ್ಡ ಟ್ರಿಮ್ ಮಾಡಿಸುವಂತೆಯೂ ಫನ್ನಿಯಾಗಿ ಸಲಹೆ ಕೊಟ್ಟರು. ಈ ಮೂಲಕ ಅವರು ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿಯೇ ಕಿಚಾಯಿಸಿದರು.

‘ರಾಹುಲ್ ಗಾಂಧಿಯವರು ಭಾರತ್​ ಜೋಡೋ ಯಾತ್ರೆಯಂಥ ಅದ್ಭುತ ಕೆಲಸ ಮಾಡಿದ್ದಾರೆ. ಅದಾನಿ ವಿಷಯದ ಬಗ್ಗೆ ಲೋಕಸಭೆಯಲ್ಲಿ ಚೆನ್ನಾಗಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಹಲವು ಒಳ್ಳೊಳ್ಳೆ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಹೆಸರು ಮಾಡಿದ್ದಾರೆ. ಇನ್ನೂ ತಡ ಮಾಡುವುದು ಬೇಡ. ನಾನು ಈ ಹಿಂದೆಯೂ ಅವರಿಗೆ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದೆ. ಆದರೆ ಅವರು ಪಾಲಿಸಲಿಲ್ಲ. ಇನ್ನಾದರೂ ಆದಷ್ಟು ಬೇಗ ಮದುವೆಯಾಗಲಿ’ ಎಂದು ಹೇಳಿದರು. ಆಗ ಅಲ್ಲಿದ್ದ ಪ್ರತಿಪಕ್ಷಗಳ ನಾಯಕರು, ಮಾಧ್ಯಮದವರೆಲ್ಲ ದೊಡ್ಡದಾಗಿ ನಕ್ಕಿದ್ದಾರೆ. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ‘ಆಯಿತು, ನೀವು ಹೇಳಿದಂತೆ ನಾನು ಕೇಳುತ್ತೇನೆ’ ಎಂದಿದ್ದಾರೆ.

ಇದೇ ವೇಳೆ ಲಾಲು ಪ್ರಸಾದ್ ಯಾದವ್ ಅವರು ಕರ್ನಾಟಕ ಚುನಾವಣೆ ಬಗ್ಗೆ ಪ್ರಸ್ತಾಪ ಮಾಡಿ ‘ಕರ್ನಾಟಕದಲ್ಲಿ ಹನುಮಂತ ಬಿಜೆಪಿಯನ್ನು ಗದೆಯಲ್ಲಿ ಹೊಡೆದು ಮಲಗಿಸಿದ್ದಾನೆ. ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದಾನೆ. ಅದರರ್ಥ ಹನುಮಂತ ಪ್ರತಿಪಕ್ಷಗಳ ಜತೆ ಇದ್ದಾನೆಂದು ಅರ್ಥ’ ಎಂದು ಹೇಳಿದರು. ಹಾಗೇ, ‘ನಾನು ತುಂಬ ದಿನಗಳ ಬಳಿಕ ಎಲ್ಲರನ್ನೂ ಭೇಟಿಯಾಗುತ್ತಿದ್ದೇನೆ. ನಾವು ಮುಂದೆ ಶಿಮ್ಲಾದಲ್ಲಿ ಸಭೆ ನಡೆಸಲಿದ್ದೇವೆ. ಮುಂದಿನ ನಡೆಯನ್ನು ಅಲ್ಲಿ ನಿರ್ಧಾರ ಮಾಡಲಿದ್ದೇವೆ. ನಾವೆಲ್ಲರೂ ಈಗ ಒಗ್ಗಟ್ಟಾಗಿದ್ದೇವೆ’ ಎಂದು ಹೇಳಿದ್ದಾರೆ. ಇಂದಿನ ಸಭೆಯಲ್ಲಿ 17 ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

Exit mobile version