Site icon Vistara News

Mallikarjun Kharge: ಕಾಂಗ್ರೆಸ್‌ ಕಾರ್ಯಕರ್ತರಿಗೆ ಗೆಟ್‌ಔಟ್‌ ಎಂದ ಖರ್ಗೆ; ವಿಡಿಯೊ ಇಲ್ಲಿದೆ

rift between Congress, Shiva Sena and NCP about seat Sharing in Maharashtra

ಹೈದರಾಬಾದ್:‌ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ (Telangana Assembly Election 2024) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ಬಿಆರ್‌ಎಸ್‌, ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಸಾಲು ಸಾಲು ರ‍್ಯಾಲಿ, ಹತ್ತಾರು ಭರವಸೆಗಳ ಮೂಲಕ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿ ವೇಳೆ ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಾತು ಕೇಳುವ ಹಾಗಿದ್ದರೆ ಕೇಳಿ, ಇಲ್ಲದಿದ್ದರೆ ಗೆಟ್‌ಔಟ್”‌ ಎಂದು ಗದರಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ತೆಲಂಗಾಣದ ಕಲ್ವಕುರ್ತಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೋಪ ಮಾಡಿಕೊಂಡು ಗದರಿದ ವಿಡಿಯೊವನ್ನು ಬಿಜೆಪಿ ಐಟಿ ಸೆಲ್‌ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯ ಹಂಚಿಕೊಂಡಿದ್ದಾರೆ. “ಸುಮ್ಮನೆ ಕುಳಿತುಕೊಳ್ಳಿ, ಇಲ್ಲವೇ ಎದ್ದು ಹೋಗಿ. ಹಾಗೆಲ್ಲ ಮಾತನಾಡಬೇಡಿ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ನಾಯಕ ಮಾತನಾಡುತ್ತಿರುವುದು ನಿಮಗೆ ಕಾಣುತ್ತಿಲ್ಲವೇ? ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಸುಮ್ಮನೆ ಕುಳಿತು ಕೇಳುವುದಿದ್ದರೆ ಕೇಳಿ, ಇಲ್ಲವೇ ನಿಮ್ಮ ದಾರಿ ನೀವು ನೋಡಿಕೊಳ್ಳಿ” ಎಂದು ಖರ್ಗೆ ಅವರು ಹೇಳಿದ್ದಾರೆ.

ವೈರಲ್‌ ಆಗಿರುವ ವಿಡಿಯೊ

ಅಮಿತ್‌ ಮಾಳವಿಯ ಅವರು ಈ ವಿಡಿಯೊವನ್ನು ಶೇರ್‌ ಮಾಡುವ ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಿದ್ದಾರೆ. “ಇದು ಸಾಮಾನ್ಯ ಸಂಗತಿ ಅಲ್ಲ. ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ‍್ಯಾಲಿಯಲ್ಲಿ ಹೀಗೆ ವರ್ತಿಸಿದ್ದಾರೆ. ಅಸಹಾಯಕರಾಗಿ ಅವರು ಪಕ್ಷದ ಕಾರ್ಯಕರ್ತರ ವಿರುದ್ಧ ಕೂಗಾಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು ಗೌರವ ನೀಡುತ್ತಲ್ಲ ಎಂದು ಖರ್ಗೆ ಅವರು ಅಸಹಾಯಕರಾಗಿದ್ದಾರೆ” ಎಂದು ಮಾಳವಿಯ ಕುಟುಕಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲೂ ಕರ್ನಾಟಕದ ವಿದ್ಯುತ್‌ ರಾಜಕೀಯ; ಖರ್ಗೆ ವಿರುದ್ಧ ಹರಿಹಾಯ್ದ ಬಿಆರ್‌ಎಸ್ ನಾಯಕ ಕೆಟಿಆರ್

“ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬಸ್ಥರು ರಬ್ಬರ್‌ ಸ್ಟ್ಯಾಂಪ್‌ ರೀತಿ ಬಳಸುತ್ತಿದ್ದಾರೆ. ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನೀಡಿದ ಜಾಹೀರಾತುಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೊವನ್ನು ಸ್ಟ್ಯಾಂಪ್‌ ಸೈಜ್‌ಗೆ ಇಳಿಸಲಾಗಿದೆ. ಅಶೋಕ್‌ ಗೆಹ್ಲೋಟ್‌ ಹಾಗೂ ರಾಹುಲ್‌ ಗಾಂಧಿ ಅವರ ಫೋಟೊವನ್ನು ದೊಡ್ಡದಾಗಿ ಬಳಸಲಾಗಿದೆ. ದಲಿತ ಎಂಬ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಅವಮಾನಿಸುತ್ತಿದೆಯೇ” ಎಂದು ಮಾಳವಿಯ ಪ್ರಶ್ನಿಸಿದ್ದಾರೆ. ತೆಲಂಗಾಣದಲ್ಲಿ ನವೆಂಬರ್‌ 30ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version