Site icon Vistara News

Pankaj Udhas: ‘ಚಂದಕ್ಕಿಂತ ಚಂದ….’ ಗಜಲ್ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ

Ghazal Singer Pankaj Udhas is no more

ಮುಂಬೈ: ಖ್ಯಾತ ಗಜಲ್ ಗಾಯಕ (Ghazal Singer) ಪಂಕಜ್ ಉದಾಸ್ (Pankaj Udhas) ಅವರು ತಮ್ಮ 72ನೇ ವಯಸ್ಸಿನಲ್ಲಿ ಸೋಮವಾರ ನಿಧನರಾದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪಂಕಜ್ ಉದಾಸ್ ಅವರು, ನಟ ಸುದೀಪ್ ಅವರ ‘ಸ್ಪರ್ಶ’ ಚಿತ್ರದ ‘ಚಂದಕ್ಕಿಂತ ಚಂದ… ನೀನೇ ಸುಂದರ…..’ ಗಜಲ್ ಹಾಡಿಗೆ ದನಿಯಾಗಿದ್ದರು.

ಪಂಕಜ್ ಉದಾಸ್ ಅವರ ನಿಧನವನ್ನು ಅವರ ಪುತ್ರಿ ನಯಾಬ್ ಅವರು ಖಚಿತ ಪಡಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪಂಕಜ್ ಉದಾಸ್ ಅವರು ಫೆಬ್ರವರಿ 26 ನಿಧನರಾದರೆಂದು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸಲು ನಾವು ದುಃಖಿತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ… ನೀನೇ ಸುಂದರ.. ಹಾಡು

ಪಂಕಜ್ ಅವರ ನಿಧನಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರು, ನನ್ನ ಬಾಲ್ಯದ ಅತ್ಯಂತ ಮಹತ್ವದ ವ್ಯಕ್ತಿಯನ್ನು ನಾನು ಕಳೆದುಕೊಂಡೆ. ಪಂಕಜ್ ಉದಾಸ್ ಅವರೇ ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನೀವು ಇಲ್ಲ ಎಂದು ತಿಳಿದು ನನ್ನ ಹೃದಯ ಭಾರವಾಗಿದೆ ಎಂದು ಹೇಳಿದ್ದಾರೆ.

1980ರಲ್ಲಿ ಗಜಲ್ ಆಲ್ಬಮ್ ಬಿಡುಗಡೆ ಮಾಡುವ ಮೂಲಕ ಪಂಕಜ್ ಅವರು ತಮ್ಮ ವೃತ್ತಿಯನ್ನೂ ಆರಂಭಿಸಿದರು. 1981ರಲ್ಲಿ ಮುಕರಾರ್, 1982ರಲ್ಲಿ ತರನ್ನಮ್, 1983ರಲ್ಲಿ ಮೆಹಫಿಲ್ ಆಲ್ಬಮ್‌ಗಳ ಮೂಲಕ ಮನೆ ಮಾತಾದರು. ಗಜಲ್ ಗಾಯಕರಾಗಿ ಖ್ಯಾತಿ ಗಳಿಸಿದ ಬಳಿಕ ಪಂಕಜ್ ಅವರು, ಮಹೇಶ್ ಭಟ್ ನಿರ್ದೇಶನದ ನಾಮ್ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಪರಿಚಿತರಾದರು. ಈ ಚಿತ್ರದ ಚಿಟ್ಟಿ ಆಯೀ ಹೈ ಹಾಡು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಅವರು ಹಿಂದಿ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಲವು ವರ್ಷಗಳಲ್ಲಿ ಗುರುತಿಸಿಕೊಂಡರು.

ಆಲ್ಬಮ್‌ಗಳು ಮತ್ತು ಜಗತ್ತಿನಾದ್ಯಂತ ಲೈವ್ ಕಾನ್ಸರ್ಟ್ ಮೂಲಕ ಪಂಕಜ್ ಅವರು ಹೆಚ್ಚು ಜನಪ್ರಿಯಗೊಂಡರು. 2006ರಲ್ಲಿ ಭಾರತ ಸರ್ಕಾರವು ಅವರಿಗೆ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಪಂಕಜ್ ಅವರ ಸಹೋದರರಾದ, ನಿರ್ಮಲ್ ಉದಾಸ್ ಮತ್ತು ಮನಹಾರ್ ಉದಾಸ್ ಕೂಡ ಗಾಯಕರಾಗಿದ್ದಾರೆ.

2000ರಲ್ಲಿ ತೆರೆ ಕಂಡ ಸ್ಪರ್ಶ ಚಲನಚಿತ್ರದಲ್ಲಿನ ಚಂದಕ್ಕಿಂತ ಚಂದ… ಗಜಲ್‌ಗೆ ಪಂಕಜ್ ಅವರು ದನಿಯಾಗಿದ್ದರು. ಹಂಸಲೇಖ ಸಂಗೀತ ನಿರ್ದೇಶನದ ಈ ಹಾಡನ್ನು ಇಟಗಿ ಈರಣ್ಣ ಬರೆದಿದ್ದರು. ಕಿಚ್ಚ ಸುದೀಪ್ ನಿರ್ದೇಶನ ಈ ಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Vani Jairam Passes Away : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಹಾಡಿರುವ ಜನಪ್ರಿಯ 25 ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ

Exit mobile version