ಜಮ್ಮು: ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದು, ಉನ್ನತ ಹುದ್ದೆಗಳನ್ನು ಅನುಭವಿಸಿದ್ದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಅವರು ತಮ್ಮ ಪಕ್ಷದ ಹೆಸರು ಡೆಮಾಕ್ರಟಿಕ್ ಆಜಾದ್ ಪಾರ್ಟಿ (Democratic Azad Party) ಎಂದು ತಿಳಿಸಿದ್ದಾರೆ.
ಜುಮ್ಮುವಿನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಿದ ಆಜಾದ್, ಹೊಸ ಪಕ್ಷವು ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಯಾವುದೇ ಪ್ರಭಾವಕ್ಕೊಳಗಾಗದೇ ಸ್ವತಂತ್ರವಾಗಿರುತ್ತದೆ ಎಂದು ಖಚಿತಪಡಿಸಿದರು. ಇದೇ ವೇಳೆ, ಪಕ್ಷದ ಧ್ವಜ ಅನಾವರಣ ಮಾಡಿದರು. ಪಕ್ಷದ ಧ್ವಜವು ಸಾಸಿವೆ, ಬಿಳಿ ಮತ್ತು ನೀಲಿ ಬಣ್ಣಗಳನ್ನು ಹೊಂದಿದೆ. ನಿನ್ನೆಯಷ್ಟೇ ಅವರು ತಮ್ಮ ಪಕ್ಷದ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದರು.
ಸಂಪೂರ್ಣ ರಾಜ್ಯಕ್ಕಾಗಿ ಹೋರಾಟ
ಕಾಂಗ್ರೆಸ್ ತೊರೆದ ಬಳಿಕ ಜಮ್ಮುವಿನಲ್ಲಿ ಮೊದಲ ಬಾರಿಗೆ ಮಾತನಾಡಿದ್ದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವನ್ನು ಕಲ್ಪಿಸುವುದೇ ತಮ್ಮ ಪಕ್ಷದ ಗುರಿಯಾಗಿರಲಿದೆ ಎಂದು ಹೇಳಿದ್ದರು.
ಇದೇ ವೇಳೆ ಕಾಂಗ್ರೆಸ್ ಟೀಕಿಸಿದ್ದ ಅವರು, ಕಾಂಗ್ರೆಸ್ ಪಕ್ಷವನ್ನು ನಮ್ಮಿಂದ, ನಮ್ಮ ರಕ್ತದಿಂದ ಕಟ್ಟಲಾಗಿತ್ತೇ ಹೊರತು ಕಂಪ್ಯೂಟರ್, ಟ್ವಿಟರ್‌ನಿಂದ ಅಲ್ಲ. ಜನರು ನಮ್ಮನ್ನು ಹೀಯಾಳಿಸುತ್ತಿದ್ದಾರೆ. ಆದರೆ, ಅವರ ಈ ಪ್ರಯತ್ನ ಕೇವಲ ಕಂಪ್ಯೂಟರ್ ಮತ್ತು ಟ್ವೀಟ್ಸ್‌ಗೆ ಮಾತ್ರವೇ ಸೀಮಿತವಾಗಿರಲಿದೆ ಎಂದು ದೂರಿದ್ದರು.
ಇದನ್ನೂ ಓದಿ | ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್