ನವ ದೆಹಲಿ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರನ್ನು ಮಂಗಳವಾರ ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ನೇಮಕ ಮಾಡಿದ್ದರು. ಆದರೆ ನೇಮಕಗೊಂಡ ಒಂದೇ ತಾಸಿನಲ್ಲಿ ಈ ಹುದ್ದೆಗೆ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ್ದಾರೆ. ‘ನನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ಹೊಸ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಕಾರಣ ಹೇಳಿದ್ದಾರೆ. ಇನ್ನು ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಮಂಗಳವಾರವೇ ರಚನೆಗೊಂಡಿದ್ದು, 11 ನಾಯಕರನ್ನು ಒಳಗೊಂಡಿದೆ. ಜಮ್ಮು-ಕಾಶ್ಮೀರ ಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಕಾರಿ ಅಧ್ಯಕ್ಷ ಇದರ ಶಾಶ್ವತ ಆಹ್ವಾನಿತರು ಆಗಿರುತ್ತಾರೆ.
ಜಮ್ಮು-ಕಾಶ್ಮೀರದ ಕಾಂಗ್ರೆಸ್ನ ಸಾಂಸ್ಥಿಕ ಹುದ್ದೆಗಳಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಇಲ್ಲಿನ ಪ್ರದೇಶ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಿಕಾರ್ ರಸೂಲ್ ವಾನಿ ನೇಮಕಗೊಂಡಿದ್ದಾರೆ. ಇವರು ಗುಲಾಂ ನಬಿ ಆಜಾದ್ಗೆ ಅತ್ಯಾಪ್ತರು. ಹಾಗೇ, ರಮಣ್ ಭಲ್ಲಾ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಆದರೆ ಆಜಾದ್ ಮಾತ್ರ ತಮಗೆ ಕೊಟ್ಟ ಹುದ್ದೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆರೋಗ್ಯ ಸರಿಯಿಲ್ಲ ಎಂದು ಅವರು ಹೇಳಿದ್ದರೂ, ವಾಸ್ತವ ಕಾರಣ ಬೇರೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಗುಲಾಂ ನಬಿ ಆಜಾದ್ ಎಐಸಿಸಿಯ ಅಖಿಲ ಭಾರತೀಯ ರಾಜಕೀಯ ವ್ಯವಹಾರ ಸಮಿತಿಯಲ್ಲಿ ಇದ್ದರು. ಅಲ್ಲಿಂದ ತೆಗೆದು ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನನ್ನು ಮಾಡಿದ್ದು ತಮಗೆ ಕೊಟ್ಟ ಹಿಂಬಡ್ತಿ ಎಂದೇ ಅವರು ಭಾವಿಸಿದ್ದಾರೆ. ಹೀಗಾಗಿಯೇ ಹುದ್ದೆ ತೊರೆದಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಾಯಕರಿಗೆ ಅಸಮಾಧಾನ
ಜಮ್ಮು-ಕಾಶ್ಮೀರ ಕಾಂಗ್ರೆಸ್ನಲ್ಲಿ ಮಂಗಳವಾರ ದೊಡ್ಡಮಟ್ಟದ ಬದಲಾವಣೆಯಾಗಿ, ಪ್ರಚಾರ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ, ಸಮನ್ವಯ ಸಮಿತಿ, ಪ್ರಣಾಳಿಕಾ ಸಮಿತಿ ಸೇರಿ ಇನ್ನಿತರ ಕೆಲವು ಸಮಿತಿಗಳ ರಚನೆ, ರೀ -ಶಫಲ್ ಆಗಿದ್ದರ ಬಗ್ಗೆ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶ್ವನಿ ಹಂಡಾ ಪ್ರತಿಕ್ರಿಯೆ ನೀಡಿ, ‘ಜಮ್ಮು-ಕಾಶ್ಮೀರದಲ್ಲಿ ಪಕ್ಷ ಸಂಘಟನೆಯಲ್ಲಿ ತಳಮಟ್ಟದಿಂದ ಕೆಲಸ ಮಾಡಿದವರನ್ನು ಪ್ರಚಾರ ಸಮಿತಿಗೆ ನೇಮಕ ಮಾಡಲಿಲ್ಲ. ಅವರಿಗೆ ಅನ್ಯಾಯ ಮಾಡಲಾಗಿದೆ. ಇದೇ ಕಾರಣರಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ ಕೊಟ್ಟಿದ್ದಾರೆ’ ಎಂದಿದ್ದಾರೆ.
ಹಾಗೇ, ಇನ್ನೊಬ್ಬ ನಾಯಕ, ಮಾಜಿ ಶಾಸಕ ಹಾಜಿ ಅಬ್ದುಲ್ ರಶೀದ್ ದಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ಜಮ್ಮು-ಕಾಶ್ಮೀರ ಪ್ರದೇಶ ಸಮಿತಿ ಅಧ್ಯಕ್ಷರ ನೇಮಕ ಮಾಡುವಾಗ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚನೆ-ಚರ್ಚೆ ನಡೆಸಲಿಲ್ಲ. ಈಗಿನ ನೇಮಕಾತಿ ವಿರುದ್ಧ ನಾವು ಅಸಮಾಧಾನಹೊಂದಿ, ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟಿದ್ದೇನೆ’ ಎಂದಿದ್ದಾರೆ.
ಗುಲಾಂ ನಬಿ ಆಜಾದ್ ಬಂಡಾಯ?
ಗುಲಾಂ ನಬಿ ಆಜಾದ್ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದರು. ಕಳೆದ ವರ್ಷ ಅವರ ಅವಧಿ ಮುಗಿದ ಮೇಲೆ ಕಾಂಗ್ರೆಸ್ ಅವರನ್ನು ಮರುನಾಮನಿರ್ದೇಶನ ಮಾಡಲಿಲ್ಲ. ಇವರು ಜಿ23 ಗುಂಪಿನ ಪ್ರಮುಖ ನಾಯಕರಾಗಿದ್ದು, ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಪದೇಪದೆ ಆಗ್ರಹ ಮಾಡುತ್ತ ಬಂದಿದ್ದಾರೆ. ಒಂದರ ಬೆನ್ನಿಗೆ ಒಂದರಂತೆ ಚುನಾವಣೆಯಲ್ಲಿ ಸೋತ ನಂತರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಇವರು, ಕಾಂಗ್ರೆಸ್ನಲ್ಲಿ ಸಾಂಸ್ಥಿಕ ಸಂಘಟನೆಯಾಗಬೇಕು ಎಂದು ಒತ್ತಡ ಹೇರುತ್ತಲೇ ಇದ್ದವರು. ಇದೀಗ ಕೊಟ್ಟ ಹುದ್ದೆಯನ್ನು ತೊರೆದ ಬೆನ್ನಲ್ಲೇ, ಇವರೂ ಕೂಡ ಕಾಂಗ್ರೆಸ್ನಿಂದ ಬಂಡಾಯ ಏಳಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಸ್ಪರ್ಧಿಸಲ್ಲ ಎಂದ ಪವಾರ್, ಪ್ರತಿಪಕ್ಷಗಳ ಪ್ಲ್ಯಾನ್‌ಗೆ ಆರಂಭದಲ್ಲೇ ಹಿನ್ನಡೆ