ನವ ದೆಹಲಿ: ಕಾಂಗ್ರೆಸ್ ಪಕ್ಷಕ್ಕೆರಾಜೀನಾಮೆ ನೀಡಿ ಹೊಸ ಪಕ್ಷವನ್ನ ಸ್ಥಾಪಿಸಲು ಮುಂದದಾಗಿರುವ ಗುಲಾಂ ನಬಿ ಆಜಾದ್ (Ghulam Nabi Azad) ಅವರು ರಾಹುಲ್ ಗಾಂಧಿ ಹಾಗೂ ಪಕ್ಷದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಆತ್ಮ ಗೌರವ ಇರುವವರು ಯಾರೂ ಕಾಂಗ್ರೆಸ್‌ನಲ್ಲಿ ಇರಬಾರದು, ಪಕ್ಷ ಬಿಟ್ಟು ಹೊರಗೆ ಬರಬೇಕು. ಕೇವಲ 40 ವರ್ಷ ಆದವರಿಂದ ಪಕ್ಷ ನಡೆಸಲು ಸಾಧ್ಯವಿಲ್ಲ, ಭಾರತ್ ಜೋಡೋ ಯಾತ್ರೆಯಿಂದ ಯಾವ ಉಪಯೋಗವೂ ಇಲ್ಲ ಎಂದು ಆಜಾದ್ ಟೀಕಿಸಿದ್ದಾರೆ.
ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಲು ಮುಂದಾಗಿರುವ ಆಜಾದ್ ಅವರು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಜತೆ ಸೇರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನ ಇದ್ದವರು ಪಕ್ಷದಿಂದ ಹೊರಗೆ ಬರಬೇಕು ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಈಗ ಹೊಗಳಭಟ್ಟರ ಪಕ್ಷವಾಗಿದೆ. ಅದೀಗ ಜೀ ಹುಜೂರಿ ಹಾಗೂ ರಾಹುಲ್ ಗಾಂಧಿಗೆ ಹತ್ತಿರದವರ ಪಕ್ಷವಾಗಿದೆ. ಹಿರಿಯರಿಂದ ಪಕ್ಷಕ್ಕೆ ಏನು ಲಾಭವಿಲ್ಲ ಎಂದರೆ ಏನು ಅರ್ಥ? ಬ್ರಿಟಿಷರನ್ನು ಮಹಾತ್ಮ ಗಾಂಧಿ ಹೊರಹಾಕಿದಾಗ ಅವರಿಗೆ ವಯಸ್ಸು ಎಷ್ಟಿತ್ತು? ಜನತಾ ಪಕ್ಷವನ್ನು ಸೋಲಿಸಿದಾಗ ಇಂದಿರಾ ಗಾಂಧಿ ಅವರ ವಯಸ್ಸು ಎಷ್ಟು? ನೀವು ಕೇವಲ 30 ಅಥವಾ 40 ವರ್ಷದವರೊಂದಿಗೆ ಪಕ್ಷವನ್ನು ಹೊಂದಲು ಸಾಧ್ಯವಿಲ್ಲಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಕಾರ್ಯಶೈಲಿಯಿಂದ ಈವರೆಗೂ ಒಂದೂ ಎಲೆಕ್ಷನ್ ಗೆದ್ದಿಲ್ಲ. 2013ರಿಂದ ಕಾಂಗ್ರೆಸ್ ಸತತ ಸೋಲು ಅನುಭವಿಸುತ್ತಿದೆ. ರಾಹುಲ್ ಗಾಂಧಿಯೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಟ್ವಿಟರ್ ಮೂಲಕವೇ ನೀವು ಪಕ್ಷವನ್ನು ಸಂಘಟಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಕೈಗೊಂಡಿದೆ. ಅದಕ್ಕಿಂತ ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಭಾರತ್ ಜೋಡೋ ಯಾತ್ರೆಯಿಂದ ಏನೂ ಲಾಭವಿಲ್ಲ ಎಂದು ಆಜಾದ್ ಹೇಳಿದ್ದಾರೆ.
ಇದನ್ನೂ ಓದಿ | Ghulam Nabi Azad | ರಾಹುಲ್ ಗಾಂಧಿ ವಿರುದ್ಧ ಗುಲಾಂ ನಬಿ ಆಜಾದ್ ಆರೋಪ ನಿರಾಧಾರ ಎಂದ ಸಿದ್ದರಾಮಯ್ಯ