Site icon Vistara News

Ghulam Nabi Azad | ಕಾಂಗ್ರೆಸ್​ ಬಿಟ್ಟು ಜಮ್ಮು ಕಾಶ್ಮೀರಕ್ಕೆ ಹೊರಟ ಆಜಾದ್​; ಹೊಸ ಪಕ್ಷ ರಚನೆಯ ಘೋಷಣೆ

Ghulam Nabi Azad

ನವ ದೆಹಲಿ: ಗುಲಾಂ ನಬಿ ಆಜಾದ್​ ಇಂದು ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಮುಖ ಕಾಂಗ್ರೆಸ್​ ಮುಖಂಡರು ಬಿಟ್ಟು ಹೋಗಿದ್ದಾರೆ. ಆದರೆ ಗುಲಾಂ ರಾಜೀನಾಮೆಯಷ್ಟು ದೊಡ್ಡ ವಿಷಯವಾಗಿರಲಿಲ್ಲ. ಪಕ್ಷದ ಒಬ್ಬ ಪ್ರಭಾವಿ, ಹಿರಿಯ ನಾಯಕನೆನಿಸಿಕೊಂಡಿದ್ದ ಗುಲಾಂ ನಬಿ ಆಜಾದ್​ ಇತ್ತೀಚೆಗೆ ರೆಬಲ್ ಆಗಿದ್ದರು. ಅದು ಅವರ ಮಾತು, ನಡವಳಿಕೆಯಲ್ಲಿ ವ್ಯಕ್ತವಾಗುತ್ತಿತ್ತು. ಇತ್ತೀಚೆಗೆ ಜಮ್ಮು-ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲಂತೂ ಅವರು ಕಾಂಗ್ರೆಸ್​ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು ಸ್ಪಷ್ಟವೇ ಆಗಿತ್ತು.

ಇಂದು ಕಾಂಗ್ರೆಸ್​​ ಬಿಟ್ಟು ಹೋದ ಗುಲಾಂ ನಬಿ ಆಜಾದ್​ ಸುಮ್ಮನೆ, ಮೌನವಾಗಿ ಹೋಗಿಲ್ಲ. ರಾಹುಲ್​ ಗಾಂಧಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಅವರೊಬ್ಬ ಅಪ್ರಬುದ್ಧ ಎಂದು ಹೇಳಿಹೋಗಿದ್ದಾರೆ. ಐದು ಪುಟಗಳ ಸುದೀರ್ಘ ಪತ್ರದಲ್ಲಿ, 10ಕ್ಕೂ ಹೆಚ್ಚು ಟೀಕೆಗಳನ್ನು ಮಾಡಿದ್ದಾರೆ. ತಾನು ಹೊರಡುತ್ತಿದ್ದೇನೆ, ಪಕ್ಷದೊಳಗಿನ ಹುಳುಕು ಎತ್ತಿ ತೋರಿಸಿಯೇ ಹೋಗುತ್ತೇನೆ ಎಂಬ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಕಾಂಗ್ರೆಸ್​ನಿಂದ ಹೋದ ಗುಲಾಂ ನಬಿ ಆಜಾದ್ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಈಗಾಗಲೇ ರಾಜಕೀಯ ವಲಯದಲ್ಲಿ ಎದ್ದಿದೆ. ಆದರೆ ಅವರು ಇನ್ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಅವರದ್ದೇ ಒಂದು ಪಕ್ಷ ರಚನೆ ಮಾಡುತ್ತಿದ್ದಾರೆ..!

ತಮ್ಮ ಮುಂದಿನ ನಡೆಯ ಬಗ್ಗೆ ಇಂಡಿಯಾ ಟುಡೆ ಜತೆ ಮಾತನಾಡಿದ ಗುಲಾಂ ನಬಿ ಆಜಾದ್​ ‘ನಾನು ಜಮ್ಮು-ಕಾಶ್ಮೀರಕ್ಕೆ ಹೋಗುತ್ತೇನೆ. ನನ್ನದೇ ಆದ ಒಂದು ರಾಜಕೀಯ ಪಕ್ಷ ರಚನೆ ಮಾಡುತ್ತೇನೆ. ರಾಷ್ಟ್ರ ರಾಜಕಾರಣಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸುತ್ತೇನೆ’ ಎಂದು ಹೇಳಿದ್ದಾರೆ. ಗಾಂಧಿ ಕುಟುಂಬದ ಬಗ್ಗೆ ತಮಗಿರುವ ಬೇಸರ ಹೊರಹಾಕಿರುವ ಅವರು ‘ನನಗೆ ಗಾಂಧಿ ಕುಟುಂಬದೊಂದಿಗೆ ವೈಯಕ್ತಿಕವಾಗಿ ಅತ್ಯಂತ ಒಳ್ಳೆಯ ಸ್ನೇಹವಿದೆ. ನಾನಿಲ್ಲಿ ಯಾವುದೇ ವೈಯಕ್ತಿಕ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕಾಂಗ್ರೆಸ್​ ಪಕ್ಷದ ಅಧಃಪತನ ಸಹಿಸಲಾಗುತ್ತಿಲ್ಲ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Ghulam Nabi Azad‌ | ಅಪ್ರಬುದ್ಧತೆಯಿಂದ ಸಿಡುಕಿನವರೆಗೆ… ರಾಹುಲ್‌ ಗಾಂಧಿ ವಿರುದ್ಧ ಗುಲಾಂ ನಬಿ ಮಾಡಿದ 10 ಟೀಕೆಗಳು!

Exit mobile version