ಶ್ರೀನಗರ: ಸುದೀರ್ಘ ಪಯಣದ ಬಳಿಕ ಕಾಂಗ್ರೆಸ್ಸಿಗೆ ವಿದಾಯ ಹೇಳಿರುವ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಭಾನುವಾರ ಹೊಸ ಪಕ್ಷ ಘೋಷಿಸದಿದ್ದರೂ, ಪಕ್ಷದ ಹೆಸರು ಹಾಗೂ ಅದರ ಸಂಸ್ಕೃತಿ, ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. “ನನ್ನ ನೂತನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರಿಡುತ್ತೇನೆ. ಪಕ್ಷವು ಗಂಗೆ-ಯಮುನೆಯ ಸಂಸ್ಕೃತಿಯನ್ನು ಪ್ರತಿಫಲಿಸುವಂತೆ ಇರುತ್ತದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಬಳಿಕ ಜಮ್ಮುವಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, “ನನ್ನ ಪಕ್ಷಕ್ಕೆ ಇದುವರೆಗೆ ಹೆಸರಿಟ್ಟಿಲ್ಲ. ಕಣಿವೆಯ ಜನರೇ ಪಕ್ಷದ ಹೆಸರು ಹಾಗೂ ಧ್ವಜವನ್ನು ತೀರ್ಮಾನಿಸುತ್ತಾರೆ. ಒಟ್ಟಿನಲ್ಲಿ ಪಕ್ಷವು ದೇಶೀಯತೆಯನ್ನು ಪ್ರತಿನಿಧಿಸುವಂತೆ ಇರುತ್ತದೆ” ಎಂದು ತಿಳಿಸಿದರು.
ಕಣಿವೆಯ ಅಸ್ಮಿತೆಗಾಗಿ ಪಕ್ಷ ಸ್ಥಾಪನೆ
“ಕಾಶ್ಮೀರದ ಅಸ್ಮಿತೆಗಾಗಿ ನನ್ನ ನೂತನ ಪಕ್ಷ ಹೋರಾಡಲಿದೆ” ಎಂದು ಗುಲಾಂ ನಬಿ ಹೇಳಿದರು. “ಕಾಶ್ಮೀರದ ಗತವೈಭವ ಮರಳಿಸುವುದು, ರಾಜ್ಯದ ಪುನರ್‌ಸ್ಥಾಪನೆ ಮಾಡುವುದು, ಜನರಿಗೆ ಉದ್ಯೋಗ ಕಲ್ಪಿಸುವುದು ಸೇರಿ ಹಲವು ಧ್ಯೇಯೋದ್ದೇಶದಿಂದ ನೂತನ ಪಕ್ಷ ಸ್ಥಾಪನೆ ಮಾಡುತ್ತಿದ್ದೇನೆ” ಎಂದು ವಿವರಿಸಿದರು.
ಕಾಂಗ್ರೆಸ್‌ಗೆ ರಕ್ತ ಬಸಿದಿರುವೆ:
“ಕಾಂಗ್ರೆಸ್ ಪಕ್ಷವು ಕಂಪ್ಯೂಟರ್, ಮೆಸೇಜ್, ಟ್ವಿಟರ್‌ನಿಂದ ಬಲಿಷ್ಠವಾಗಿಲ್ಲ. ಅದಕ್ಕೆ ನಾನು ಸೇರಿ ಹಲವರು ರಕ್ತ ಬಸಿದಿದ್ದೇವೆ. ಹಾಗಾಗಿಯೇ, ಅದೊಂದು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ಸಿನ ಕೆಲವರು ಟ್ವಿಟರ್ ಮೂಲಕ ನಮ್ಮ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಕೀಳು ಮಟ್ಟಕ್ಕೆ ಇಳಿದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದೇ ಕಾರಣಕ್ಕೆ ಪಕ್ಷವು ಇಂದು ತಳಮಟ್ಟಕ್ಕೆ ಕುಸಿದಿದೆ” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನ ನಾಯಕತ್ವ ಬಿಕ್ಕಟ್ಟು, ಹಿರಿಯರಿಗೆ ಮನ್ನಣೆ ಸಿಗದಿರುವುದು ಸೇರಿ ಹಲವು ಕಾರಣ ನೀಡಿ ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆದಿದ್ದಾರೆ. ಭಾನುವಾರದ ಬೃಹತ್ ಸಮಾವೇಶದಲ್ಲಿಯೇ ಆಜಾದ್ ನೂತನ ಪಕ್ಷದ ಹೆಸರು ಘೋಷಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಇನ್ನೂ ಪಕ್ಷದ ಹೆಸರೇ ಅಂತಿಮವಾಗಿಲ್ಲ. ಸಮಾವೇಶದಲ್ಲಿ ಸುಮಾರು 20 ಸಾವಿರ ಜನ ಭಾಗವಹಿಸಿದ್ದರು.
ಇದನ್ನೂ ಓದಿ | Ghulam Nabi Azad | ಮೋದಿ ಒರಟ ಎಂದುಕೊಂಡಿದ್ದೆ ಆದರೆ, ಇದು ಗುಲಾಂ ನಬಿ ಆಜಾದ್ ಮನ್ ಕಿ ಬಾತ್