ಟರ್ಕಿ-ಸಿರಿಯಾದ ಭಯಂಕರ ಭೂಕಂಪದಿಂದ (Turkey Earthquake) ಉಂಟಾದ ಹಾನಿ, ಅನಾಹುತದ ಫೋಟೋ-ವಿಡಿಯೊಗಳು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಕೆಲವೊಂದು ಮನಕಲಕುವ ದೃಶ್ಯಗಳನ್ನೂ ನೋಡಬಹುದು. 24 ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿ ಅದೆಷ್ಟೋ ಕಟ್ಟಡಗಳು, ಮನೆಗಳು ಕುಸಿದು ಬಿದ್ದಿವೆ. ಅವಶೇಷಗಳಡಿಯಲ್ಲಿ ಸಿಲುಕಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಟರ್ಕಿ-ಸಿರಿಯಾ ಭೂಕಂಪನದಲ್ಲಿ ಮಡಿದವರ ಸಂಖ್ಯೆ 7500ಕ್ಕೆ ತಲುಪಿದ್ದು, ಅದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಭೂಕಂಪನದಿಂದ ಕುಸಿದಿರುವ ಕಟ್ಟಡಗಳ ಮಣ್ಣು-ಕಲ್ಲುಗಳಡಿ ಸಿಲುಕಿರುವವರನ್ನು ಹುಡುಕಿ, ಹೊರತೆಗೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಮಧ್ಯೆ ಒಂದು ಫೋಟೋವನ್ನು ವಿಶ್ವಸಂಸ್ಥೆ ಪ್ರತಿನಿಧಿ ಮೊಹಮ್ಮದ್ ಸಫಾ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದರೆ ಒಂದು ಕ್ಷಣ ಮನಮಿಡಿಯುತ್ತದೆ. ಇಬ್ಬರು ಮಕ್ಕಳ ಫೋಟೋ ಇದು. ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಇವರು ಗುಬ್ಬಚ್ಚಿಗಳಂತೆ ಮುದುರಿ ಮಲಗಿದ್ದಾರೆ. ಅದರಲ್ಲಿ ಆ 7ವರ್ಷದ ಬಾಲಕಿ (ಅಕ್ಕ) ತನ್ನ ತಮ್ಮನ ತಲೆಯ ಮೇಲೆ ತನ್ನ ಕೈಯನ್ನು ರಕ್ಷಣಾತ್ಮಕವಾಗಿ ಇಟ್ಟುಕೊಂಡಿರುವುದನ್ನು ನೋಡಬಹುದು. ಅವರಿಬ್ಬರೂ ಇದೇ ಸ್ಥಿತಿಯಲ್ಲಿ 17 ತಾಸು ಕಳೆದಿದ್ದಾರೆ ಎಂದು ಮೊಹಮ್ಮದ್ ಸಫಾ ತಿಳಿಸಿದ್ದಾರೆ. 7 ವರ್ಷದ ಬಾಲಕಿ, ತನ್ನ ತಮ್ಮನ ಕಾಳಜಿ ಮಾಡಿದ ರೀತಿ ಇದು. ಅವರಿಬ್ಬರನ್ನೂ ಬಳಿಕ ರಕ್ಷಣೆ ಮಾಡಲಾಗಿದೆ. ಈ ಫೋಟೋವನ್ನು ಯಾರೂ ಶೇರ್ ಮಾಡುತ್ತಿಲ್ಲ. ಅದೇ ಒಮ್ಮೆ ಇವರಿಬ್ಬರು ಮೃತಪಟ್ಟಿದ್ದರೆ, ಎಲ್ಲರೂ ಶೇರ್ ಮಾಡುತ್ತಿದ್ದರು. ನಾವು ಬರೀ ನಕಾರಾತ್ಮಕ ಫೋಟೋ/ವಿಡಿಯೊ/ವಿಷಯಗಳನ್ನು ಮಾತ್ರ ಶೇರ್ ಮಾಡಿಕೊಳ್ಳುವುದಲ್ಲ, ಸಕಾರಾತ್ಮಕವಾಗಿದ್ದನ್ನೂ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.
ಫೋಟೋ ನೋಡಿದ ನೆಟ್ಟಿಗರು ಭಾವನಾತ್ಮಕ ಕಮೆಂಟ್ಗಳನ್ನು ಮಾಡಿದ್ದಾರೆ. ಬಾಲಕಿಯನ್ನು ಶ್ಲಾಘಿಸಿದ್ದಾರೆ. ‘ನಿಜಕ್ಕೂ ಪವಾಡ ಇದು..ಆ ಅಕ್ಕ ನಿಜಕ್ಕೂ ಅದ್ಭುತ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಟರ್ಕಿ-ಸಿರಿಯಾದಲ್ಲಿ ಸಂತ್ರಸ್ತ್ರರ ರಕ್ಷಣೆಯಲ್ಲಿ ತೊಡಗಿರುವ ಎಲ್ಲರಿಗೂ ಗೌರವಪೂರ್ವಕ ಧನ್ಯವಾದಗಳು’ ‘ಆ ಬಾಲಕಿ ನಿಜಕ್ಕೂ ಪುಟ್ಟ ಹೀರೋ’ ಎಂಬಿತ್ಯಾದಿ ಕಮೆಂಟ್ಗಳನ್ನು ಮಾಡಿದ್ದಾರೆ.